ಗುರುಮಿಠಕಲ್ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಚಿಂಚನಸೂರ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಗುರುಮಿಠಕಲ್ ಮತಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ವಿಧಾನಸಭಾ ಹಾಗೂ 1 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗುರುಮಿಠಕಲ್ ಮತಕ್ಷೇತ್ರದಲ್ಲಿ ಪರಾಜಯಗೊಂಡು, ಹಿನ್ನಡೆ ಸಾಧಿಸಿತು, ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ, ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಜೊತೆಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡಿದೆ, ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಜನರ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ನನ್ನ ಮೇಲೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಇನ್ನೀತರ ಸಚಿವರ ಕೃಪಾಶೀರ್ವಾದವಿದೆ, ಎಲ್ಲರ ಸಹಕಾರದಿಂದ ಮೊದಲು ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಬದಲಾವಣೆಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
ನನ್ನ ಆರೋಗ್ಯ ಕೂಡ ಉತ್ತಮವಾಗಿದೆ. ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಯತ್ನಿಸುವ ಮೂಲಕ ಬರುವ ತಾ.ಪಂ, ಜಿಪಂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿ, ಕ್ಷೇತ್ರದ ಜನರ ಒಲವು ಮತ್ತೆ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಚಿಂಚನಸೂರ ಅವರು ಹೇಳಿದರು.