ವಿಶ್ವಕರ್ಮ ಜಯಂತಿ ಬ್ಯಾನರ್ ಹಾಕದಕ್ಕೆ ಮುಖಂಡರು ಆಕ್ರೋಶ
ಹೈದರಾಬಾದ್ ಕರ್ನಾಟಕ ವಿಮೋಚನೆಗೆ ರೋಚಕ ಇತಿಹಾಸವಿದೆ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತ ದೇಶಕ್ಕೆ 15 ಆಗಸ್ಟ್ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಒಂದು ವರ್ಷ ತಡವಾಗಿ ಅಂದರೆ 17 ಸೆಪ್ಟೆಂಬರ್ 1948 ರಂದು ಸ್ವಾತಂತ್ರ್ಯ ದೊರೆಯಿತು, ಹೀಗಾಗಿ ಹೈದರಾಬಾದ್ ಕರ್ನಾಟಕ ವಿಮೋಚನೆಗೂ ಸಾಕಷ್ಟು ರಕ್ತಸಿಕ್ತವಾದ ಇತಿಹಾಸವಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದಿಟ್ಟ ನಿರ್ಧಾರ ದಿಂದ ಅಪರೇಷನ್ ಪೋಲೊ ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್ ಕರ್ನಾಟಕ ವಿಮೋಚನೆ ಗೊಂಡಿತ್ತು ಇದೊಂದು ರೋಚಕ ಇತಿಹಾಸವಾಗಿದೆ, ಇದರ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಶಿಕ್ಷಣದಿಂದಲೇ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಈ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ಜೆ ತಿದ್ದುಪಡಿ ಮಾಡುವಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಹಾಗೂ ವೈಜನಾಥ ಪಾಟೀಲ ಅವರು ಪ್ರಮುಖರು ಎಂದು ಸ್ಮರಿಸಿದ ಅವರು ಈ ತಿದ್ದುಪಡಿಯಿಂದ ಭಾಗದಿಂದ ಅನೇಕರು ಕೆಎಎಸ್, ಪಿಎಸ್ಐ ಸೇರಿದಂತೆ ಇತರೆ ಹುದ್ದೆಗಳು, ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ಮೇಡಿಕಲ್ ಸೇರಿದಂತೆ ಇನ್ನಿತರ ಸೀಟುಗಳು ಪಡೆಯಲು ಸಾಧ್ಯವಾಗಿದೆ.
371ಜೆ ಜಾರಿಗೆ ಬಂದು ಹತ್ತು ವರ್ಷಗಳು ಆಗಿದೆ ಹೀಗಾಗಿ ಜಿಲ್ಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಮೀಟಿಂಗ್ ಮಾಡಿ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಲಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಆಗುತ್ತಿದೆ ಹೀಗಾಗಿ 371ಜೆ ಲೋಪದೋಷಗಳನ್ನು ಸರಿಪಡಿಸಿ ತಿದ್ದುಪಡಿ ಮಾಡಿ ಈ ಭಾಗದ ಸರ್ಕಾರಿ ನೌಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಗೌರವ ಸನ್ಮಾನ: ತಾಲೂಕಿನ ಸರಕಾರಿ ನೌಕರರ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರರಾದ ಸಿಡಿಪಿಒ ಇಲಾಖೆಯ ಗೀತಾ ಯಡ್ರಾಮಿ, ಆಶಾ ಕಾರ್ಯಕರ್ತೆ ವಿಜುಬಾಯಿ, ಬಿಇಒ ಕಚೇರಿಯ ಮಲ್ಲಯ್ಯ, ಪಿಡಬ್ಲ್ಯುಡಿ ಇಲಾಖೆಯ ಮಹ್ಮದ್ ಮೋಸಿನ್ ಈ ನಾಲ್ಕು ಜನ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕುರ್ಚಿಗಳು ಖಾಲಿ ಖಾಲಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಇಲ್ಲದೇ ಕುರ್ಚಿಗಳು ಖಾಲಿ ಖಾಲಿಯಾಗಿ ಕಂಡುಬಂದವು. ಜಿಲ್ಲೆಯಲ್ಲಿ ಹಬ್ಬದ ವಾತಾವರಣ, ಸಂಬ್ರಮ ಇದ್ದರೆ ತಾಲೂಕಿನಲ್ಲಿ ಮಾತ್ರ ಯಾವುದೇ ಸಂಬ್ರಮ ಕಂಡುಬರಲಿಲ್ಲ ಕೇವಲ ಬೆರಳೆಣಿಕೆಯಷ್ಟು ಶಾಲಾ ಮಕ್ಕಳು ಶಿಕ್ಷಕರು ಮತ್ತು ವಿಶ್ವಕರ್ಮ ಸಮಾಜದ ಮುಖಂಡರು ಮಾತ್ರ ಹಾಜರಿದ್ದರು.
ವಿಶ್ವಕರ್ಮ ಸಮಾಜದವರಿಂದ ಆಕ್ರೋಶ: ವೇದಿಕೆಯ ಮೇಲೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬ್ಯಾನರ್ ಹಾಕಿದ್ದೀರಿ ವಿಶ್ವಕರ್ಮ ಜಯಂತಿ ಬ್ಯಾನರ್ ಏಕೆ ಹಾಕಿಲ್ಲ ಮತ್ತು ವಿಶ್ವಕರ್ಮ ಅವರ ಭಾವಚಿತ್ರ ಏಕೆ ಇಟ್ಟಿಲ್ಲ ಹಾಗೂ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ, ನಮ್ಮ ಸಮಾಜಕ್ಕೆ ಮಲತಾಯಿ ಧೋರಣೆ ಮಾಡಿದ್ದೀರಿ ಎಂದು ಸಮಾಜದ ಮುಖಂಡರಾದ ರವಿ ಪಂಚಾಳ, ಶಂಭು ಕರದಾಳ ಇತರರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ ವಿಶ್ವಕರ್ಮ, ವಿಶ್ವರಾಜ ಇನಾಂದಾರ್ ದಿಗ್ಗಾಂವ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಆಕ್ರಂ ಪಾಷಾ, ಬಿಇಒ ಶಶಿಧರ ಬಿರಾದಾರ, ಜಿಪಂ ಎಇಇ ಬಾಲಕೃಷ್ಣ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಪಿಎಸ್ಐ ಚಂದ್ರಾಮಪ್ಪ, ಎಪಿಎಂಸಿ ಕಾರ್ಯದರ್ಶಿ ಸವೀತಾ ಗೋಣಿ, ಬಿಆರ್ ಸಿ ಮಲ್ಲಿಕಾರ್ಜುನ ಸೇಡಂ, ಶಿರಸ್ತೇದಾರ್ ಅಶ್ವಥನಾರಾಯಣ, ಮೈನೋದ್ದಿನ್ ಸೇರಿದಂತೆ ಇತರರು ಇದ್ದರು. ಸಂತೋಷ ಶಿರನಾಳ್ ನಿರೂಪಿಸಿ ವಂದಿಸಿದರು.