ಕಲ್ಯಾಣ ಕರ್ನಾಟಕದ ಪದವೀಧರರಿಗಾಗಿ ಐಎಎಸ್, ಕೆಎಎಸ್ ಉಚಿತ ತರಬೇತಿ ಕೇಂದ್ರ ಕಲಬುರ್ಗಿಯಲ್ಲಿ ಪ್ರಾರಂಭ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಪದವೀಧರರಿಗಾಗಿ ಐಎಎಸ್, ಕೆಎಎಸ್ ಉಚಿತ ತರಬೇತಿ ಕೇಂದ್ರ ಕಲಬುರ್ಗಿಯಲ್ಲಿ ಪ್ರಾರಂಭ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿಂಗ್, ಪೊಲೀಸ್ ಗ್ರೂಪ್ ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಪಡೆಯಬೇಕು ಎಂದರೆ ನಮ್ಮ ಭಾಗದ ಪದವೀಧರರು ರಾಜಧಾನಿ ಬೆಂಗಳೂರು ಮಹಾನಗರವನ್ನು ಅವಲಂಬಿಸಬೇಕಿತ್ತು. ಇದರಿಂದ ಈ ಭಾಗದ ವಿದ್ಯಾರ್ಥಿಗಳ ಉನ್ನತ ಹುದ್ದೆಗಳ ಕನಸು ಕನಸಾಗಿಯೇ ಉಳಿಯುತಿತ್ತು ಎಂದು ಹೇಳಿದರು.
ಇದೀಗ ಸತತ ಪ್ರಯತ್ನದಿಂದ ಸರ್ಕಾರದ ವತಿಯಿಂದ ರಾಜ್ಯದ ಎರಡನೇ ತರಬೇತಿ ಕೇಂದ್ರ ನಮ್ಮ ಕಲಬುರ್ಗಿಯಲ್ಲಿ ಪ್ರಾರಂಭವಾಗುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಇದರಿಂದ ಕಲ್ಯಾಣಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದ್ದು, ಅವರ ಬಹುದಿನದ ಬೇಡಿಕೆ ಈಡೇರಿಸಿದ ಸಂತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಲ್ಲಿ ಉಚಿತ ತರಬೇತಿ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ತರಬೇತಿಯೊಂದಿಗೆ ಊಟ – ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರತಿ ವರ್ಷ 500 ಮಂದಿ ಪದವೀಧರರು ಉಚಿತ ತರಬೇತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದೆಲ್ಲವೂ ಸಾಧ್ಯವಾಗುತ್ತಿರುವುದು ಆರ್ಟಿಕಲ್ 371 (ಜೆ) ನಿಂದ. ಕಲ್ಯಾಣ ಕರ್ನಾಟಕ ಭಾಗದ ಉತ್ತಮ ಶಿಕ್ಷಣದೊಂದಿಗೆ ಇದೀಗ ತರಬೇತಿ ಕೇಂದ್ರವು ಪ್ರಾರಂಭವಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿದ್ದಾರೆ.