ಇಂಗಳಗಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಸಾಮಾನ್ಯ ರೈತ ಮಹಿಳೆ ರಮಾಬಾಯಿ ಈರಣ್ಣ ಗುಡುಬಾ ಭರ್ಜರಿ ಗೆಲುವು, ಬೆಂಬಲಿಗರಿಂದ ವಿಜಯೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ಉಪ ಚುನಾವಣೆಗೆ ಸ್ಪರ್ಧಿಸಿದ್ದ ಸಾಮಾನ್ಯ ರೈತ ಮಹಿಳೆ ರಮಾಬಾಯಿ ಈರಣ್ಣ ಗುಡುಬಾ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಏಕಾಂಗಿಯಾಗಿ ಸಂಘರ್ಷ ನಡೆಸಿ ಭರ್ಜರಿ ಗೆಲವು ಸಾಧಿಸಿದ್ದಾರೆ.
ಇಂಗಳಗಿ ಗ್ರಾಪಂ ವ್ಯಾಪ್ತಿಯ ವಾರ್ಡ್-3ರ ಚುನಾಯಿತ ಸದಸ್ಯ ಮಲ್ಲಿಕಾರ್ಜುನ ವಡಗಾಂವ ಅವರ ನಿಧನದ ಪ್ರಯುಕ್ತ ನಡೆದ ಉಪ ಚುನಾವಣೆಯಲ್ಲಿ ರಮಾಬಾಯಿ ಈರಣ್ಣ ಗುಡುಬಾ ಅವರು ಯಾವೂದೇ ಪಕ್ಷದ ಬೆಂಬಲವಿಲ್ಲದೆ ಮತದಾರರ ಮನಗೆದ್ದು ಚುನಾವಣೆಯಲ್ಲಿ ವಿಜಯದ ನಗೆ ಬೀರಿದ್ದಾರೆ.
ಇಲ್ಲಿ ಒಟ್ಟು 1500 ಮತದಾರರ ಪೈಕಿ 745 ಮತದಾರರು ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಸವರಾಜ ಹಣಮಂತ ಭೋವಿ 265 ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಸವರಾಜ ಸಾಬಣ್ಣ ಹಲಕರ್ಟಿ 118 ಮತಗಳನ್ನು ಪಡೆದಿದ್ದು ಇಬ್ಬರು ಪರಾಭವಗೊಂಡರೆ, ಇತ್ತ ರೈತ ಮಹಿಳೆ ರಮಾಬಾಯಿ ಗುಡುಬಾ ಅವರು 303 ಮತಗಳನ್ನು ಪಡೆದು 38 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಚುನಾವಣಾ ಸಮೀಕ್ಷೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸಿದ ಕಾರಣ ಎಲ್ಲ ಸಮುದಾಯದ ಮತದಾರರು ಒಗ್ಗಟ್ಟಿನಿಂದ ನನ್ನ ತಾಯಿಯನ್ನು ಗೆಲ್ಲಿಸುವ ಮೂಲಕ ಪರೋಕ್ಷವಾಗಿ ನನಗೆ ಬಲ ತಂದು ಕೊಟ್ಟಿದ್ದಾರೆ. ಜನರ ದನಿಯಾಗಿ ಕೆಲಸ ಮಾಡುತ್ತೇನೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣ ಗುಡಬಾ ತಿಳಿಸಿದ್ದಾರೆ.
ವಿಜಯೋತ್ಸವ: ಇಂಗಳಗಿ ಗ್ರಾಪಂ ಉಪ ಚುನಾವಣೆಯಲ್ಲಿ ರೈತ ಮಹಿಳೆ ರಮಾಬಾಯಿ ಗುಡುಬಾ ಗೆಲುವು ಸಾಧಿಸುತ್ತಿದ್ದಂತೆ ಅವರ ಬೆಂಬಲಿಗರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.