ಇಂಗಳಗಿ-ವಾಡಿ ರಸ್ತೆ ಬದಲಾವಣೆ ಮಾಡದೆ ಈಗಿರುವ ಹಳೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಎಸಿಸಿ ಸಿಮೆಂಟ್ ಕಂಪನಿ ಬದಲಾವಣೆ ಮಾಡುತ್ತಿರುವುದನ್ನು ವಿರೋಧಿಸಿ, ಈಗಿರುವ ಅದೇ ಹಳೆ ರಸ್ತೆ ದುರಸ್ತಿ ಮಾಡುವಂತೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಾಡಿ ಪಟ್ಟಣದ ಶ್ರೀನಿವಾಸ್ ಚೌಕ್ ಹತ್ತಿರ ಇಂಗಳಗಿ ಗ್ರಾಮಸ್ಥರಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ರೈತ ಮುಖಂಡ ಡಾ.ಸಾಯಬಣ್ಣ ಗುಡುಬಾ ಮಾತನಾಡಿ,  ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆ ನಿರ್ಮಾಣ ಮಾಡಿ, ಸುಮಾರು 60 ವರ್ಷ ಕಳೆದಿವೆ. ಆದರೆ ಈಗ ಸಿಮೆಂಟ್ ರಸ್ತೆ ಸಂಪೂರ್ಣ ಬಿರುಕು ಬಿಟ್ಟು, ಹೆಜ್ಜೆಗೊಂದು ತಗ್ಗು ಗುಂಡಿಗಳು ಬಿದ್ದಿವೆ. ಪರಿಣಾಮ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೂ ಇಂಗಳಗಿ ಗ್ರಾಮದಿಂದ 2 ಸಾವಿರ ಎಕರೆ ಜಮೀನು ಖರೀದಿ ಮಾಡಿದ ಎಸಿಸಿ ಸಿಮೆಂಟ್ ಕಂಪನಿಯಾಗಲಿ ಅಥವಾ ಜಿಲ್ಲಾ ಆಡಳಿತವಾಗಲಿ ರಸ್ತೆ ದುರಸ್ತಿ ಮಾಡುವುದನ್ನೇ ಮರೆತು ಬಿಟ್ಟಿದೆ. ಬದಲಾಗಿ ರಸ್ತೆಯನ್ನೇ ಬದಲಾವಣೆ ಮಾಡುವುದಕ್ಕೆ ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಸಂಚು ಮಾಡಿ, ಜಿಲ್ಲಾ ಆಡಳಿತದಿಂದ ಬೇರೆ ಮಾರ್ಗದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವುದಕ್ಕೆ ಕ್ರೀಯಾಯೋಜನೆ ತಯಾರಿಸಿ ಅಧಿಕಾರಿಗಳಿಗೆ ಇಂಗಳಗಿ ಗ್ರಾಮಕ್ಕೆ ರಸ್ತೆ ಸರ್ವೆ ಮಾಡುವುದಕ್ಕೆ ಕಳುಹಿಸಿರುವುದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಗಳಗಿ ಗ್ರಾಮದ ರಸ್ತೆ ಮಧ್ಯೆ ತಗ್ಗು ಗುಂಡಿಗಳು ಬಿದ್ದ ಪರಿಣಾಮ ಗರ್ಭಿಣಿಯರಿಗೆ ಗರ್ಭಪಾತವಾಗಿವೆ. ಶಾಲಾ ಮಕ್ಕಳಿಗೆ ರಸ್ತೆ ಅಪಘಾತವಾಗಿವೆ. ವೃದ್ದರಿಗೆ ಬೆನ್ನು ಮೂಳೆ ಮುರಿದಿವೆ. ಆದರೆ ಎಸಿಸಿ ಸಿಮೆಂಟ್ ಕಂಪನಿಗೆ 2 ಸಾವಿರ ಎಕರೆ ಜಮೀನು ನೀಡಿದ ರೈತರು, ಗ್ರಾಮಸ್ಥರು ಗುಣಮಟ್ಟ ರಸ್ತೆ ಇಲ್ಲದೇ ಗೊಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಮತ್ತು ರೈತ ಮುಖಂಡರಾದ ಗೌಸ್ ದುದ್ದನಿ ಮತ್ತು ಕಾಶಿನಾಥ ಚನ್ನಗುಂಡ ಮಾತನಾಡಿ, ಎಸಿಸಿ ಸಿಮೆಂಟ್ ಕಂಪನಿಯವರು ಈಗಿರುವ ರಸ್ತೆ ದುರಸ್ತಿ ಮಾಡುವುದು ಬಿಟ್ಟು, ಕಂಪನಿಗೆ ತಮ್ಮ ಸರಕು ಸಾಗಾಣಿಕೆಗೆ ಅನುಕೂಲವಾಗುವ ಸಲುವಾಗಿ ಇಂಗಳಗಿ ಗ್ರಾಮದ ಹೊರ ವಲಯದ ಇನ್ನೊಂದು ರಸ್ತೆ ನಿರ್ಮಾಣ ಮಾಡುವುದಕ್ಕೆ ಜಿಲ್ಲಾ ಆಡಳಿತ ಕ್ರೀಯಾಯೋಜನೆ ರೂಪಿಸಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಬೇಡವಾದ ಹೊಸ ರಸ್ತೆ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ತಕ್ಷಣ ಈ ಕ್ರೀಯಾಯೋಜನೆ ರದ್ದು ಮಾಡಿ, ಇಂಗಳಗಿ ಗ್ರಾಮ ಉದಯವಾಗಿನಿಂದ ಗ್ರಾಮಸ್ಥರು ಈಗಾಗಲೇ ಬಳಸುತ್ತಿರುವ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ಹಳೆ ರಸ್ತೆಯನ್ನೇ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆಯನ್ನು ಯಾವುದೇ ಕಾರಣಕ್ಕೆ ಬೇರೆ ಕಡೆ ಬದಲಾವಣೆ ಮಾಡುವುದಕ್ಕೆ ಗ್ರಾಮಸ್ಥರ ಸಂಪೂರ್ಣ ವಿರೋಧ ಇರುತ್ತದೆ. ಇದರಿಂದ ಕೂಡಲೇ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಳೆ ರಸ್ತೆಯನ್ನೇ ನಿರ್ಮಾಣ ಮಾಡುವುದಕ್ಕೆ ಎಸಿಸಿ ಸಿಮೆಂಟ್ ಕಂಪನಿ ಕ್ರೀಯಾಯೋಜನೆ ರೂಪಿಸಬೇಕು.ಇಂಗಳಗಿ ಗ್ರಾಮದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಗುಣಮಟ್ಟ ಶಾಲೆ ಕಟ್ಟುವುದಕ್ಕೆ ಎಸಿಸಿ ಸಿಮೆಂಟ್ ಕಂಪನಿ ವತಿಯಿಂದ ಎರಡು ಎಕರೆ ಜಮೀನು ಇಂಗಳಗಿ ಗ್ರಾಮಕ್ಕೆ ನೀಡಬೇಕು, ಇಂಗಳಗಿ ಗ್ರಾಮದ ಜನರಿಗೆ ಸುಮಾರು 60 ವರ್ಷದ ಹಿಂದೆ ಎಸಿಸಿ ಕಂಪನಿ ಕುಡಿಯುವ ನೀರು ಸರಬರಾಜು ಮಾಡಿದೆ. ಆದರೆ ಈಗ ಗ್ರಾಮದ ಜನಸಂಖ್ಯೆ ದುಪ್ಪಟ್ಟಾಗಿದೆ. ಪರಿಣಾಮ ನೀರಿಗಾಗಿ ಕೆಲ ವಾರ್ಡ್‌ ಜನರು ದಿನನಿತ್ಯ ಪರದಾಡುವಂತಾಗಿದೆ. ಆದ್ದರಿಂದ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಎಸಿಸಿ ಸಿಮೆಂಟ್ ಕಂಪನಿಯಿಂದ ಪ್ರತ್ಯೇಕವಾಗಿ ಪೈಪ್ ಲೈನ್ ಅಳವಡಿಸಬೇಕು ಎಂದು ಆಗ್ರಹಿಸಿದರು.

ಇಂಗಳಗಿ ಗ್ರಾಮದ ಸುಮಾರು 2 ಸಾವಿರ ಎಕರೆ ಜಮೀನು ಎಸಿಸಿ ಸಿಮೆಂಟ್ ಕಂಪನಿ ರೈತರಿಂದ ಖರೀದಿ ಮಾಡಿದೆ. ಆದರೆ ಇಲ್ಲಿಯವರೆಗೆ ಇಲ್ಲಿನ ಯುವಕರಿಗೆ ಉದ್ಯೋಗ ನೀಡಿಲ್ಲ. ಇದರಿಂದ ಯುವಕರು ಉದ್ಯೋಗ ಹರಿಸಿ ದೂರದ ನಗರಗಳಿಗೆ ಹೋಗುವಂತಾಗಿದೆ. ಇದರಿಂದ ಕಂಪನಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು, ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಹೋಗುವ ಮಾರ್ಗ ಮಧ್ಯದ ರಸ್ತೆಯಲ್ಲಿ ಕಳ್ಳರ ಉಪಟಳ ಹೆಚ್ಚಾಗಿದೆ. ಇದರಿಂದ ಇಂಗಳಗಿಯಿಂದ ವಾಡಿ ಪಟ್ಟಣಕ್ಕೆ ಹೋಗುವ ತನಕ ರಸ್ತೆ ಮಧ್ಯೆ ಬೀದಿ ದೀಪ ಅಳವಡಿಸಬೇಕು, ಇಂಗಳಗಿ ಗ್ರಾಮದಲ್ಲಿ ಪ್ರತಿಯೊಂದು ವಾರ್ಡನಲ್ಲಿ ಸೋಲಾರ್ ದೀಪ ಅಳವಡಿಸುವುದಕ್ಕೆ ಎಸಿಸಿ ಸಿಮೆಂಟ್ ಕಂಪನಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಪ್ರಮುಖರಾದ ಚಂದ್ರಕಾಂತ ಹೂಗಾರ್, ಡಾ.ಮೋಹನ್ ಪವಾರ್, ನಬಿ ಪಠಾಣ, ಶರಣು ರಾವೂರ, ಶಿವಕುಮಾರ್ ತೆಳಿಗೆರಿ, ಶೇರ ಅಲಿ ದುದ್ದನಿ, ವೆಂಕಟಗಿರಿ ಕಟ್ಟಿಮನಿ, ಗಿರಿ ಪವಾರ್, ಬಸವರಾಜ ನಾಟಿಕಾರ್, ಮಲ್ಲಪ್ಪ ನಾಟಿಕಾರ, ಬಸವರಾಜ ಹಲಕಟ್ಟಿ, ಈರಣ್ಣ ನಾಟಿಕಾರ್, ಮಲ್ಲಿಕಾರ್ಜುನ ಸಿಮಿ, ಸಂಗಣ್ಣ ಸಾಹು ಯಾದಗಿರಿ, ಪ್ರೇಮ ರಾಠೋಡ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!