ಇಂಗಳಗಿ-ವಾಡಿ ಮಧ್ಯದ ರಸ್ತೆ ದುರಸ್ತಿಗೆ ಮುಖಂಡರ ಒತ್ತಾಯ, ಸಚಿವ ಪ್ರಿಯಾಂಕ್ ಖರ್ಗೆಯಿಂದ ಗ್ರೀನ್ ಸಿಗ್ನಲ್
ನಾಗಾವಿ ಎಕ್ಸಪ್ರೆಸ್
ವಾಡಿ: ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹದಗೆಟ್ಟ ಪರಿಣಾಮ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಗೌಸ್ ದುದ್ದನಿ ನೇತೃತ್ವದಲ್ಲಿ ಸದಸ್ಯರು ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಪಟ್ಟಣದ ಸಮೀಪದ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ. ರಸ್ತೆ ನಿರ್ಮಾಣ ಮಾಡಿ, ಸುಮಾರು 60 ವರ್ಷ ಕಳೆದಿವೆ. ಆದರೆ ಈಗ ಸಿಮೆಂಟ್ ರಸ್ತೆ ಸಂಪೂರ್ಣ ಬಿರುಕು ಬಿಟ್ಟು, ಹೆಜ್ಜೆಗೊಂದು ತಗ್ಗು ಗುಂಡಿಗಳು ಬಿದ್ದಿವೆ. ಪರಿಣಾಮ ಇಂತಹ ಬಿರುಕು ಬಿಟ್ಟ ರಸ್ತೆ ಮಧ್ಯೆಯೇ ಸಂಚಾರ ಮಾಡುವುದಕ್ಕೆ ಪ್ರಯಾಣಿಕರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೂ ಇಲ್ಲಿಯವರೆಗೆ ರಸ್ತೆ ದುರಸ್ತಿ ಮಾಡಿರುವುದಿಲ್ಲ ಎಂದು ಪತ್ರದಲ್ಲಿ ಸಮಿತಿ ಸದಸ್ಯರು ದೂರಿದ್ದಾರೆ.
ಇಂಗಳಗಿ ಗ್ರಾಮದ ರಸ್ತೆ ಮಧ್ಯೆ ತಗ್ಗು ಗುಂಡಿಗಳು ಬಿದ್ದ ಪರಿಣಾಮ ವಾಹನಗಳಲ್ಲೇ ಗರ್ಭಿಣಿಯರಿಗೆ ಗರ್ಭಪಾತವಾದ ಹಲವು ಘಟನೆಗಳಿಗೆ ಹದಗೆಟ್ಟ ರಸ್ತೆಯೇ ಸಾಕ್ಷಿಯಾಗಿದೆ. ಶಾಲಾ ಮಕ್ಕಳಿಗೆ ಹಲವು ಬಾರಿ ರಸ್ತೆ ಅಪಘಾತವಾಗಿವೆ. ವೃದ್ದರಿಗೆ ಬೆನ್ನು ಮೂಳೆ ಮುರಿದಿವೆ. ಇದು ದಿನನಿತ್ಯದ ಹಲವು ಘಟನೆಗಳಿಗೆ ಜೀವಂತ ಸಾಕ್ಷಿಯಾಗಿದೆ. ಹದಗೆಟ್ಟ ರಸ್ತೆಯ ಭಯಾನಕ ದೃಶ್ಯಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಸಚಿವರಿಂದ ರಸ್ತೆ ದುರಸ್ತಿ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸಮಿತಿ ಅಧ್ಯಕ್ಷ ಗೌಸ್ ದುದ್ದನಿ ತಿಳಿಸಿದ್ದಾರೆ.
ಇಂಗಳಗಿ ಗ್ರಾಮದಿಂದ ಇಲ್ಲಿಯವರೆಗೆ ಸುಮಾರು 2 ಸಾವಿರ ಎಕರೆ ಜಮೀನು ರೈತರಿಂದ ಎಸಿಸಿ ಸಿಮೆಂಟ್ ಕಂಪನಿ ಖರೀದಿಸಿದೆ. ಆದರೆ ಗ್ರಾಮದ ಜನರಿಗೆ ಸುಗಮ ಸಂಚಾರಕ್ಕೆ ಕನಿಷ್ಟ ಗುಣಮಟ್ಟ ರಸ್ತೆ ಕೂಡ ನಿರ್ಮಾಣ ಮಾಡಿಲ್ಲ. ಇಂಗಳಗಿ ಗ್ರಾಮವನ್ನು ಕಂಪನಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಎಂದು ಕಂಪನಿ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳ, ಮಹಿಳೆಯರ ಹಿತದೃಷ್ಟಿಯಿಂದ ಸಚಿವರು ಮುತುವರ್ಜಿ ವಹಿಸಿ ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆ ನಿರ್ಮಾಣ ಮಾಡಬೇಕು ಎಂದು ಪತ್ರದಲ್ಲಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಸಮಿತಿ ಅಧ್ಯಕ್ಷರಾದ ಗೌಸ್ ದುದ್ದನಿ, ಕಾರ್ಯದರ್ಶಿ ಕಾಶಿನಾಥ ಚನ್ನಗುಂಡ, ಖಜಾಂಚಿ ಡಾ.ಮೋಹನ ಪವಾರ್, ಡಾ.ಸಾಯಬಣ್ಣಾ ಗುಡುಬಾ, ಚಂದ್ರಕಾಂತ ಹೂಗಾರ್, ವೆಂಕಟಿಗಿರಿ ಕಟ್ಟಿಮನಿ, ನಬಿ ಪಠಾಣ, ಶರಣು ರಾವೂರ, ಶಿವಕುಮಾರ್ ತೆಳಿಗೆರಿ, ಈರಣ್ಣ ನಾಟಿಕಾರ್, ಪ್ರೇಮಕುಮಾರ ರಾಠೋಡ ಇದ್ದರು.
“ಇಂಗಳಗಿ ಗ್ರಾಮದಿಂದ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡುವುದಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದೆ. ಕೆಲವೇ ತಿಂಗಳಲ್ಲಿ ಇಂಗಳಗಿ ರಸ್ತೆ ಕಾಮಗಾರಿ ಆರಂಭಿಸಲಾಗುತ್ತದೆ”.- ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರು.