ಜ.14 ರಿಂದ ಕಾಶಿ ಜಗದ್ಗುರುಗಳ ತಪೋನುಷ್ಠಾನ, ಉತ್ತರ ಪ್ರದೇಶ ಪ್ರಯಾಗರಾಜ ಸಂಗಮ ಕ್ಷೇತ್ರದಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಸಮಾವೇಶ

ನಾಗಾವಿ ಎಕ್ಸಪ್ರೆಸ್

ವಾರಾಣಾಸಿ(ಉ.ಪ್ರ.): ಉತ್ತರ ಪ್ರದೇಶದ ಗಂಗಾ, ಯಮುನಾ ಮತ್ತು ಸರಸ್ವತಿ ಪುಣ್ಯ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರವಾದ ಪ್ರಯಾಗರಾಜದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಜರುಗುವ ಮಹಾಕುಂಭ ಮೇಳದ ಅಂಗವಾಗಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 44 ದಿನಗಳ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವು ಉತ್ತರಾಯಣ ಪುಣ್ಯಕಾಲದ ಆರಂಭದ ದಿನವಾದ ಮಕರ ಸಂಕ್ರಮಣದಂದು (ಜ.14) ಆರಂಭಗೊಳ್ಳಲಿದೆ ಎಂದು ಪ್ರಯಾಗರಾಜ ಜಂಗಮವಾಡಿ ಶಾಖಾಮಠದ ವ್ಯವಸ್ಥಾಪಕಿ ನಲಿನಿ ಚಿರಮೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಗರಾಜ ಕ್ಷೇತ್ರದ ದಶಾಶ್ವಮೇಧ ಘಾಟದಲ್ಲಿರುವ ಕಾಶಿ ಜ್ಞಾನ ಪೀಠದ ಪ್ರಾಚೀನ ಜಂಗಮವಾಡಿ ಶಾಖಾಮಠದ ಆವರಣದಲ್ಲಿ ಮಕರ ಸಂಕ್ರಮಣದಿಂದ ಮಹಾಶಿವರಾತ್ರಿಯವರೆಗೆ ನಡೆಯುವ ಈ ತಪೋನುಷ್ಠಾನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳಲ್ಲಿರುವ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾವಿರಾರು ಶಿಷ್ಯ-ಸದ್ಭಕ್ತರು ಆಗಮಿಸಿ ನಿತ್ಯದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಪೋನುಷ್ಠಾನದ ದಿನಚರಿ: ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ತಪೋನುಷ್ಠಾನದ ದಿನಚರಿಯಲ್ಲಿ ನಿತ್ಯವೂ ಪ್ರಾತಃಕಾಲ 6 ರಿಂದ 8 ರವರೆಗೆ ಗಂಗಾನದಿಯಲ್ಲಿ ಭಕ್ತರೊಂದಿಗೆ ಮಂಗಳ ಸ್ನಾನ, ಮುಂಜಾನೆ 8 ರಿಂದ 10 ಗಂಟೆಯವರಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಅಪರಾಹ್ನ 12 ಗಂಟೆ ನಂತರ ಮಹಾಪ್ರಸಾದ (ಅನ್ನಸಂತರ್ಪಣೆ), ಸಂಜೆ 3 ರಿಂದ 4 ಸಾಮೂಹಿಕ ಭಜನೆಯ ನಂತರ ಧರ್ಮ ಚಿಂತನ ಸಮಾವೇಶ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ನೂರಾರು ಮಠಾಧೀಶರು ಪಾಲ್ಗೊಂಡು ಉಪದೇಶಾಮೃತ ನೀಡಲಿದ್ದಾರೆ. ಪ್ರತಿನಿತ್ಯವೂ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀಸಿದ್ಧಾಂತ ಶಿಖಾಮಣಿಯಲ್ಲಿಯ ಮೋಕ್ಷ ಮಾರ್ಗದ ಅನೇಕ ಮೌಲಿಕ ವಿಚಾರಗಳನ್ನು ಕೇಂದ್ರೀಕರಿಸಿ ಆಶೀರ್ವಚನ ನೀಡುವರು.

ನವೀಕೃತ ಮಠದ ಉದ್ಘಾಟನೆ : ಫೆ.4 ರಂದು ವೀರಶೈವ ಧರ್ಮದ ಪಂಚಪೀಠಗಳ ಸಮಾನ ಪೀಠಾಚಾರ್ಯರಿಂದ ಪ್ರಯಾಗರಾಜ ದಶಾಶ್ವಮೇಧ ಘಾಟದಲ್ಲಿರುವ ನವೀಕೃತ ಶಾಖಾಮಠದ ಉದ್ಘಾಟನೆ ನೆರವೇರಲಿದೆ. ಇದರ ಅಂಗವಾಗಿ ಇದೇ ಮೊದಲ ಬಾರಿಗೆ ಕಲಬುರ್ಗಿ ಜಿಲ್ಲೆ ಶಾಖಾಪೂರ ತಪೋವನಮಠದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ತಮ್ಮ ಭಕ್ತಗಣದ ಸಹಕಾರದಲ್ಲಿ ಕರ್ನಾಟಕದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಿರುವ ಪಂಚಪೀಠ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಹ ಅಲ್ಲಿ ಜರುಗಲಿದೆ.

ಭಕ್ತರಿಗೆ ವಸತಿ ವ್ಯವಸ್ಥೆ : ಈ ಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತ ಸಂಕುಲಕ್ಕೆ ತಂಗಲು ಪ್ರಯಾಗರಾಜ ದಶಾಶ್ವಮೇಧ ಘಾಟದ ಜಂಗಮವಾಡಿ ಶಾಖಾಮಠದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ವ್ಯವಸ್ಥೆ ಮತ್ತು ಧರ್ಮಸಮಾವೇಶ ಕುರಿತು ಆರ್.ಕೆ.ಸ್ವಾಮಿ (ಮೊ: 9422321166), ಶಿವಾನಂದಸ್ವಾಮಿ ಹಿರೇಮಠ (ಮೊ. 9585011008) ಇಲ್ಲವೇ ಮಂಜುನಾಥ ಪಾಟೀಲ (ಮೊ. 9353886065) ಅವರನ್ನು ಸಂಪರ್ಕಿಸುವಂತೆ ಪ್ರಯಾಗರಾಜ ಜಂಗಮವಾಡಿ ಶಾಖಾಮಠದ ವ್ಯವಸ್ಥಾಪಕಿ ನಲಿನಿ ಚಿರಮೇ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!