ಜ.26 ರಂದು ಕಲಬುರ್ಗಿ ಅಂಬಿಗರ ಚೌಡಯ್ಯ ಭವನ ಉದ್ಘಾಟನೆ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ನಗರದ ಕೋಟನೂರು(ಡಿ) ಜಿಡಿಎ ಬಡಾವಣೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಸ್ಮಾರಕ ಭವನವನ್ನು ಜನವರಿ 26 ರಂದು ಉದ್ಘಾಟಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳ ಸಮೇತ ಭವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ. ಬಾಗಿಲು ಕಿತ್ತು ಹೋಗಿವೆ, ದೊಡ್ಡ ಮಟ್ಟದಲ್ಲಿ ಹುಲ್ಲು ಬೆಳೆದಿದೆ, ವಿದ್ಯುತ್ ಸಂಪರ್ಕವಿಲ್ಲ, ಯಾವುದೇ ಸಂರಕ್ಷಣೆ ಇಲ್ಲದೆ ಇರುವುದರಿಂದ ತುಂಬಾ ದುಸ್ಥಿತಿಯಲ್ಲಿದೆ. ಎರಡು ವರ್ಷಗಳಿಂದ ಬಂದ್ ಆಗಿದೆ. ಆದ್ದರಿಂದ ಅದನ್ನು ಸ್ವಚ್ಛ ಮಾಡಿ ಉದ್ಘಾಟಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಉದ್ಘಾಟನೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಾರ್ಪಣೆ ಮಾಡಿದ್ದೇವೆ ಎಂದು ಹೇಳುವವರು ಅಡಿಗಲ್ಲು ಹಾಕಿದ ಮತ್ತು ಉದ್ಘಾಟನೆ ಮಾಡಿದ್ದ ಶಿಲೆ ತೋರಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರಕಾರದ ಅನುದಾನದಿಂದ ಭವನ ನಿರ್ಮಿಸಲಾಗಿದೆ. ಆದ್ದರಿಂದ ಉದ್ಘಾಟನೆ ಮಾಡಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಇನ್ನಷ್ಟು ಹಣವನ್ನು ಮಂಜೂರು ಮಾಡಿಸಿ ಆಧುನಿಕ ಸೌಕರ್ಯ ಇರುವಂತಹ ಭವನ ಮಾಡೋಣ. ಸುತ್ತಲಿನಲ್ಲಿ ಜಾಗ ಇದೆ. ಅಲ್ಲಿ ನಮ್ಮ ಜನಾಂಗದ ಮಕ್ಕಳಿಗೆ ಹಾಸ್ಟೆಲ್ ಮಾಡುವ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ಪಡೆಯಲಾಗುವುದು ಎಂದು ವಿವರಿಸಿದ್ದಾರೆ. ಅನುದಾನ ಬಳಕೆ ಕುರಿತು ಒಂದಷ್ಟು ಮಾಹಿತಿ ಸಮಾಜದ ಜನರಿಗೂ ಕೊಡಬೇಕಲ್ಲ. ಕೆಲವರು ಮುಂದೆ ನಿಂತು ನಾವು ಕಟ್ಟಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಸಮಾಜದ ಕೆಲವನ್ನು ಯಾರಾದರೂ ಮಾಡಬೇಕು. ಅದಕ್ಕಾಗಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.