Oplus_0

ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ಪೂರ್ವಭಾವಿ ಸಭೆ | ಸಭೆಯಲ್ಲಿ ಅಧಿಕಾರಿಗಳು ಗೈರು, ಈಡಿಗ ಸಮಾಜದ ಮುಖಂಡರು ಆಕ್ರೋಶ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಬಹುತೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಿ ಇರುವುದಕ್ಕೆ ಈಡಿಗ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಡಾ.ವಿನಯ ಗುತ್ತೇದಾರ ಗಾರಂಪಳ್ಳಿ ಮಾತನಾಡಿ, ಪೂರ್ವಭಾವಿ ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹಾಜರಿಲ್ಲ ಹೀಗಾಗಿ ಈ ಸಭೆ ರದ್ದು ಮಾಡಿ ಮುಂದೂಡುವಂತೆ ಆಗ್ರಹಿಸಿದಾಗ ಸಭೆಯಲ್ಲಿದ್ದ ಎಲ್ಲ ಮುಖಂಡರು ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗಧೀಶ್ವರಿ ನಾಶಿ ಹಾಗೂ ಡಿಸಿ ಕಚೇರಿಯ ಸಹಾಯಕ ನಿರ್ದೇಶಕ ಶರಣಪ್ಪ ಧನ್ನಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಬಾರಿ ನಾರಾಯಣ ಗುರುಗಳ ಜಯಂತಿಯನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ, ವಿಶೇಷವಾಗಿ ಖ್ಯಾತ ನಟ ವಿಜಯ್ ರಾಘವೇಂದ್ರ ಆಗಮಿಸುತ್ತಾರೆ ಅಲ್ಲದೇ ಅದ್ದೂರಿ ಮೆರವಣಿಗೆಗೆ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದ್ದು ಅಂದಾಜು ನಾಲ್ಕರಿಂದ ಐದು ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಹೀಗೆ ಇತರೆ ವಿಷಯಗಳು ಕುರಿತು ಚರ್ಚೆ, ಸಲಹೆ ಸೂಚನೆಗಳನ್ನು ನೀಡಲು ನಾವು ಬಂದಿದ್ದೇವೆ ಆದರೆ ಸಲಹೆ ಸೂಚನೆಗಳನ್ನು ಕೇಳಲು ಅಧಿಕಾರಿಗಳೇ ಗೈರು ಹಾಜರಿ ಆದರೆ ನಾವು ಯಾರಿಗೆ ಹೇಳಬೇಕು ಎಂದು ಕಟುವಾಗಿ ಪ್ರಶ್ನೆ ಮಾಡಿದರು.

ಅಧಿಕಾರಿಗಳು ಇಲ್ಲದ ಈ ಸಭೆಯನ್ನು ರದ್ದು ಮಾಡಿ ಮುಂದೂಡಿ ಮತ್ತೊಂದು ದಿನಾಂಕ ನಿಗದಿ ಮಾಡಿ ಎಂದು ಮುಖಂಡರು ಪಟ್ಟು ಹಿಡಿದಾಗ, ತಹಸೀಲ್ದಾರ್ ಅಪಾರ ಜಿಲ್ಲಾಧಿಕಾರಿಗೆ ಫೋನ್ ಮೂಲಕ ಮಾತನಾಡಿದರು ಅಲ್ಲದೇ ಖುದ್ದಾಗಿ ಭೇಟಿ ಮಾಡಲು ಹೋದಾಗ ಶಿಷ್ಟಾಚಾರ ತಹಸೀಲ್ದಾರ್ ಉಮಾಕಾಂತ ಹಳ್ಳೆ ಜೊತೆಗೆ ಸಭೆಗೆ ಆಗಮಿಸಿದಾಗ, ಗೈರು ಆದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಸಭೆಯಲ್ಲಿ ಆದ ಎಲ್ಲ ಚರ್ಚೆ ಹಾಗೂ ವಿಷಯಗಳ ಕುರಿತು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ಕಳಿಸಲಾಗುವುದು, ನಾವು ನೀವು ಜೊತೆಗೂಡಿ ಜಯಂತಿ ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದು ಉಮಾಕಾಂತ ಹಳ್ಳೆ ಹೇಳಿ ಸಿಟ್ಟಿನಲ್ಲಿದ್ದ ಮುಖಂಡರಿಗೆ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

ಜಯಂತಿ ಕಾರ್ಯಕ್ರಮದ ಸ್ಥಳದ ಆಯ್ಕೆ ಹಾಗೂ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಹಾಗೂ ಕೆಲವು ಅನುಮತಿಗಳ ಬಗ್ಗೆ ಸೇರಿದಂತೆ ಇತರೆ ವಿಷಯಗಳ ಕುರಿತು ಪಟ್ಟಿ ಸಿದ್ದ ಮಾಡಿಕೊಂಡು ಸೋಮವಾರ ಬರುತ್ತೇವೆ ಅಂದು ಪೊಲೀಸ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಸೇರಿದಂತೆ ಇತರೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಆಹ್ವಾನಿಸಬೇಕು ಎಂದು ಡಾ.ವಿನಯ ಗುತ್ತೇದಾರ ಗಾರಂಪಳ್ಳಿ ಒತ್ತಾಯಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ತಹಸೀಲ್ದಾರ್ ಅವರು ಅಂದು ಸಾಯಂಕಾಲ 4 ಗಂಟೆಗೆ ಸಮಯ ನಿಗದಿ ಮಾಡಿದರು.

ಮುಖಂಡರಾದ ಜಗದೇವ ಎಂ.ಗುತ್ತೇದಾರ, ಅಶೋಕ ಕಲಾಲ್ ಸನ್ನತ್ತಿ, ಕಾಶಿನಾಥ ಗುತ್ತೇದಾರ ಚಿತ್ತಾಪುರ, ಮಲ್ಲಿಕಾರ್ಜುನ ಕುಕ್ಕುಂದಿ, ಸಂತೋಷ ಕಟ್ಟಳ್ಳಿ, ಬಸ್ಸಯ್ಯ ಗುತ್ತೇದಾರ ತೆಲ್ಲೂರ್, ಮಹೇಶ್ ಗುತ್ತೇದಾರ ಹೊಳಕುಂದಾ, ಅಶೋಕ ಗುತ್ತೇದಾರ ಭೀಮಳ್ಳಿ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳನ್ನು ಒಂದೇ ರೀತಿಯಲ್ಲಿ ಸಮಾನಾಗಿ ನೋಡಿಕೊಳ್ಳಬೇಕು ತಾರತಮ್ಯ ಮತ್ತು ನಿರ್ಲಕ್ಷ್ಯ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ನಾರಾಯಣ ಗುರುಗಳು ಜಯಂತಿಯನ್ನು ಕಟ್ಟುನಿಟ್ಟಾಗಿ ಆಚರಿಸುವ ಸಲುವಾಗಿ ಎಲ್ಲಾ ಇಲಾಖೆಗಳಿಗೆ ಪ್ರತ್ಯೇಕವಾಗಿ ಆದೇಶ ಪತ್ರ ಕಳುಹಿಸಿ ಎಂದು ಹೇಳಿದರು.

ಸರ್ಕಾರದ ಆದೇಶದಂತೆ ಸೆ.7 ರಂದು ಜಯಂತಿ ಆಚರಣೆ, ಜಿಲ್ಲಾ ಮಟ್ಟದ ಜಯಂತಿ ಆಚರಣೆ ಸೆ.16 ಕ್ಕೆ: 

ಸರ್ಕಾರದ ಆದೇಶದಂತೆ ಶಿಷ್ಟಾಚಾರ ಪ್ರಕಾರ ನಾರಾಯಣ ಗುರುಗಳ ಜಯಂತಿಯನ್ನು ಸೆಪ್ಟೆಂಬರ್ 7 ರಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಅದರಂತೆ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಜಯಂತಿ ಆಚರಣೆ ಮಾಡುವಂತೆ ಆದೇಶ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಜಿಲ್ಲಾ ಮಟ್ಟದ ಜಯಂತಿ ಆಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 16 ರಂದು ಅದ್ದೂರಿಯಾಗಿ ನೆರವೇರಿಸಲು ಈಗಾಗಲೇ ಈಡಿಗ ಸಮಾಜದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಹೀಗಾಗಿ ಅಂದು ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಮುಖಂಡರು ಮನವಿ ಮಾಡಿದಾಗ ಇದಕ್ಕೆ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಈಡಿಗ ಸರ್ಕಾರಿ ಈಡಿಗ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್ ಗುತ್ತೇದಾರ, ಈಡಿಗ ಸಮಾಜದ ಮುಖಂಡರಾದ ಅಂಬಯ್ಯ ಗುತ್ತೇದಾರ, ಮಂಜುನಾಥ ಗುತ್ತೇದಾರ, ನಾಗರಾಜ್ ಗುತ್ತೇದಾರ ಜೇವರ್ಗಿ, ರಾಹುಲ್ ಗುತ್ತೇದಾರ, ನರಸಯ್ಯ ಕಲಾಲ್, ಅಶೋಕ ಬಿ.ಸಂಕಲಾಪೂರ, ರಾಮಯ್ಯ ಅಲ್ದಿಹಾಳ, ಭೀಮಯ್ಯ ಗುತ್ತೇದಾರ ಭಂಕೂರ, ವಿಜಯಕುಮಾರ್ ಕವಾಲ್ದಾರ್, ರಾಘವೇಂದ್ರ ಗುತ್ತೇದಾರ, ಶ್ರೀನಿವಾಸ ಗುತ್ತೇದಾರ, ಶಿವುಕುಮಾರ, ಸತೀಶ್ ಗುತ್ತೇದಾರ, ಶ್ರೀನಾಥ್ ಕಲಾಲ್, ಸಾಯಿನಾಥ್ ಗುತ್ತೇದಾರ, ರಾಜು ಗುತ್ತೇದಾರ, ಯಲ್ಲಯ್ಯ ಕಲಾಲ್ ಚಿತ್ತಾಪುರ, ಸಂಜಯ ಕಪನೂರ, ಆನಂದ ಗುತ್ತೇದಾರ, ಸಾಗರ್ ಗುತ್ತೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!