ಪ್ರಸಕ್ತ ಬಜೆಟ್‌ನಲ್ಲಿ ಹಾಸ್ಟೆಲ್ ಕಾರ್ಮಿಕರ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ, ನೌಕರರನ್ನು ಖಾಯಂ ಮಾಡುವಂತೆ ಎಐಯುಟಿಯುಸಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಹಾಸ್ಟೆಲ್ ಕಾರ್ಮಿಕರಿಗೆ ಪ್ರಸಕ್ತ ಕನಿಷ್ಠ ವೇತನ ಜಾರಿ ಮಾಡಬೇಕು, ಹಾಸ್ಟೆಲ್ ನೌಕರರಿಗೆ ಖಾಯಂ ಮಾಡಬೇಕು ಅಲ್ಲಿಯವರೆಗೆ ಸೇವಾ ಭದ್ರತೆ ನೀಡಬೇಕು, ಕನಿಷ್ಠ ವೇತನ 36000 ನಿಗದಿ ಮಾಡಿಬೇಕು, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಪ್ರಸಕ್ತ ಭಜಟ್ ಅಧಿವೇಶನ ದಲ್ಲಿ ಜಾರಿ ಮಾಡಬೇಕು ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಗುರುವಾರ ರಾಜ್ಯವ್ಯಾಪಿ ಹೋರಾಟ ದ ಭಾಗವಾಗಿ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ವಿ.ಜಿ ದೇಸಾಯಿ ಮಾತನಾಡಿ, ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರ್ಕಾರಿ ಹಾಸ್ಟೇಲ್, ಆಶ್ರಮ ಶಾಲೆ, ವಸತಿಶಾಲೆ/ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆಯಲ್ಲಿರುವ ಹೊರಗುತ್ತಿಗೆ ಕಾರ್ಮಿಕರ ಸೇವೆ ಖಾಯಂಗೊಳಿಸಬೇಕು. ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿಗೊಳಿಸಬೇಕು ಹಾಗು ಎಲ್ಲಾ ಜಿಲ್ಲೆಗಳಲ್ಲಿ ವಿವಿದುದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟದಿಂದ ಕೂಡಿದೆ. ಸರ್ಕಾರಿ ಇಲಾಖೆಗಳಲ್ಲೇ ದುಡಿಯುತ್ತಿದ್ದರೂ ಕನಿಷ್ಠ ವೇತನ, ಪಿ.ಎಫ್. ರಜೆ ಸೇರಿದಂತೆ ಇನ್ನೂ ಅನೇಕ ಕಾನೂನು ಬದ್ದ ಸೌಲಭ್ಯಗಳು ಪಡೆಯಬೇಕಾದರೆ ಹರಸಾಹಸ ಪಡಬೇಕಾಗಿದೆ. ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ. ದಿನನಿತ್ಯ ಅಭದ್ರತೆಯಲ್ಲೇ ಕೆಲಸ ಮಾಡಬೇಕಿದೆ. ಸಾವಿರಾರು ಕಾರ್ಮಿಕರು ಇದೇ ಕೆಲಸವನ್ನೇ ನಂಬಿ ಬದುಕುತ್ತಿದ್ದಾರೆ. ಇವರೆಲ್ಲರೂ ಖಾಯಂ ಸ್ವರೂಪದ ಕೆಲಸ ಮಾಡುತ್ತಿದ್ದರೂ, ಅತ್ಯಂತ ಅಪಾಯಕಾರಿ ವೃತ್ತಿಯಲ್ಲಿದ್ದರೂ ಸರ್ಕಾರ ಈವರೆಗೂ ಇವರನ್ನು ಖಾಯಂಗೊಳಿಸಿಲ್ಲ. ಕನಿಷ್ಠ ಪಕ್ಷ ಇವರನ್ನು ಒಳಗುತ್ತಿಗೆ ಆಧಾರದ ಮೇಲು ತೆಗೆದುಕೊಂಡಿಲ್ಲ. ಬದಲಿಗೆ ಗುತ್ತಿಗೆದಾರರ ಮೂಲಕ ನೂತನ ಜೀತ ಪದ್ದತಿಗೆ ನೂಕಿದಂತಾಗಿದೆ ಎಂದು ಹೇಳಿದರು.
ಪ್ರಸಕ್ತ ಬಜೆಟ್‌ನಲ್ಲಿ ಕನಿಷ್ಠ ವೇತನ ಹೆಚ್ಚಳ ಕುರಿತ ರಾಜ್ಯ ಸರ್ಕಾರದ ಅಧಿಸೂಚನೆ ಕೂಡಲೆ ಜಾರಿಯಾಗಬೇಕು. ಸರ್ಕಾರಿ ಆದೇಶವಾಗಿ ಮಾರ್ಪಾಡಬೇಕು ಮತ್ತು ಬಜೆಟಿನಲ್ಲಿ ವೇತನದ ಅನುದಾನವನ್ನು ಮೀಸಲಿಡಬೇಕು. ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರ ಸೇವೆಯನ್ನು ಖಾಯಂ ಮಾಡಿ. ಅಲ್ಲಿವರೆಗೂ ಇಲಾಖೆಗಳಿಂದಲೇ ನೇರವಾಗಿ ವೇತನ ಪಾವತಿಸಿ ಮತ್ತು ಸೇವಾಭದ್ರತೆ ಒದಗಿಸಬೇಕು, ಎಲ್ಲಾ ಜಿಲ್ಲೆಗಳಲ್ಲಿ ವಿವಿದುದ್ದೇಶ ಕಾರ್ಮಿಕರ ಸಹಕಾರ ಸಂಘ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು, ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಬೇಕು. ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಇಎಸ್‌ಐ ಸೌಲಭ್ಯ ದೊರೆಯುವಂತೆ ಸಮರ್ಪಕ ಕ್ರಮಕೈಗೊಳ್ಳಬೇಕು. ಪ್ರಕ್ರಿಯೆಯನ್ನು ಸರಳೀಕೃತಗೊಳಿಸಬೇಕು. ಇಎಸ್‌ಐ ಸೌಲಭ್ಯದ ಮಿತಿಯನ್ನು ರೂ. 36,000 ಕ್ಕೆ ಹೆಚ್ಚಿಸಬೇಕು, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ರೂ. 36,000 ನಿಗದಿಪಡಿಸಬೇಕು. 2017ರ ನಂತರ ಆರಂಭಗೊಂಡ ಎಲ್ಲಾ ವಸತಿ ಶಾಲೆ/ಕಾಲೇಜುಗಳಿಗೆ 11 ಜನ ಅಡುಗೆ ಸಿಬ್ಬಂಧಿಯವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ವಿ.ಜಿ ದೇಸಾಯಿ, ಹಾಸ್ಟೆಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಎಮ್ ಜಿ, ಜಿಲ್ಲಾ ಕಾರ್ಯಧರ್ಶಿ ಶರಣು ಹೇರೂರ, ಬಸವರಾಜ್ ಹುಳಗೊಳ, ಶರಣಮ್ಮ ಕಟ್ಟಿಮನಿ, ಸಂತೋಷ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

