ಕಲಬುರ್ಗಿಯಲ್ಲಿ ಜ.21ರಂದು ಅಂಬಿಗರ ಚೌಡಯ್ಯ ಜಯಂತಿ ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧಾರ: ಕಮಕನೂರ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ನಿಜಶರಣ ಅಂಬಿಗರ ಚೌಡಯ್ಯನವರ 905 ನೇಯ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21 ರಂದು ಬೆಳಿಗ್ಗೆ 11 ಗಂಟೆಗೆ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನಿಡುವರು ಎಂದು ತಿಳಿಸಿದರು.
ಅಂದು ಮಧ್ಯಾಹ್ನ 2 ಗಂಟೆಗೆ ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ಮೆರವಣಿಗೆ ತಲುಪಿದ ನಂತರ ವೇದಿಕೆಯ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಜಯಂತ್ಯೋತ್ಸವ ಸಮಿತಿಗೆ ಶಿವಾನಂದ ಹೊನಗುಂಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಜಯಂತ್ಯೋತ್ಸವ ನಿಮಿತ್ಯ ಯುನೈಟೆಡ್ ಆಸ್ಪತ್ರೆಯವರು ರಿಯಾಯಿತಿ ದರದಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡಲಿದ್ದಾರೆಂದು ತಿಳಿಸಿದ ಅವರು, ಸಮಾಜದ ಬಹುದಿನದ ಬೇಡಿಕೆಯಾಗಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಕಾಲಸನ್ನಿಹಿತವಾಗಿದೆ. ಪಾಲಿಕೆ ಆಯುಕ್ತರು ಸ್ಥಳವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ ಹಾಗಾಗಿ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ಸಹ ಮಾಡಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೋಲಿ ಸಮಾಜ ಸೇರ್ಪಡೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಬಂದಿರುವ ಸೂಚನೆಯಂತೆ ಪರ್ಯಾಯ ಪದಗಳನ್ನು ರಾಜ್ಯ ಸರಕಾರದಿಂದ ಪುನಃ ಕೇಂದ್ರಕ್ಕೆ ಕಳಿಸಿ ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಶಿವಾನಂದ ಹೊನಗುಂಟಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಗುಂಡು ಐನಾಪೂರ, ಶಾಂತಪ್ಪ, ಕೂಡಿ, ರಮೇಶ್ ನಾಟೀಕಾರ, ಶಿವುಕುಮಾರ ಯಾಗಾಪೂರ, ಬಸವರಾಜ ಬೂದಿಹಾಳ, ಅಣ್ಣಪ್ಪ ಜಮಾದಾರ ಸೇರಿದಂತೆ ಇತರರು ಇದ್ದರು.