Oplus_0

ಕಾಂತರಾಜು ವರದಿಯಿಂದ ಕೋಲಿ,ಕಬ್ಬಲಿಗ, ಬೆಸ್ತ ಸಮುದಾಯಕ್ಕೆ ಅನ್ಯಾಯ: ಎಂಎಲ್ಸಿ ತಳವಾರ ಸಾಬಣ್ಣ 

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಶ್ರೀ ಎಚ್. ಕಾಂತರಾಜುರವರ ನೇತೃತ್ವದ ಆಯೋಗವು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧರಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ಅಂಕಿ-ಸಂಖ್ಯೆಯನ್ನು ಅವೈಜ್ಞಾನಿಕವಾಗಿ ತಿರುಚಿ ಅತ್ಯಂತ ಹಿಂದುಳಿದ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳ ಒಟ್ಟು ಜನಸಂಖ್ಯೆ ಕೇವಲ 14.5 ಲಕ್ಷ ಎಂದಿದೆ. ಅದರಲ್ಲಿ ಬೆಸ್ತ (3,99,383), ಅಂಬಿಗ (1,34,230), ಗಂಗಾಮತ (73,627), ಕಬ್ಬೇರ್/ಕಬ್ಬೇರ (58,289), ಕಬ್ಬಲಿಗ (3,88,082) ಮತ್ತು ಮೋಗವೀರ (1,21,478) ಎಂದು ತೋರಿಸಲಾಗಿದೆ. ಈ ಜನಸಂಖ್ಯೆ ವಾಸ್ತವದಿಂದ ಕೂಡಿಲ್ಲಾ ಎಂದು ಸಮುದಾಯದ ಜನರು ವಿರೋಧಿಸುತ್ತಿದ್ದಾರೆ

ಏಕೆಂದರೆ, 1977 ರಲ್ಲಿ ಹಾವನೂರು ವರದಿ ಆಧರಿಸಿ ಬಂದ ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದಲ್ಲಿ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳನ್ನು ಹಿಂದುಳಿದ ಜಾತಿಗಳಲ್ಲಿ (ಬಿ.ಸಿ.ಟಿ) ಸೇರಿಸಲಾಗಿತ್ತು. ನಂತರ 1994 ರಲ್ಲಿ ಚಿನ್ನಪ್ಪರೆಡ್ಡಿ ವರದಿಯನುಸಾರ ಇದೇ ಜಾತಿಯ 39 ಪರ್ಯಾಯ ಪದಗಳನ್ನು ಪ್ರವರ್ಗ-1 ರ ಗುಂಪಿನಲ್ಲಿ ಸೇರಿಸಲಾಯ್ತು. ಈ ಎಲ್ಲಾ ಪರ್ಯಾಯ ಪದಗಳು ಕರ್ನಾಟಕದಾದ್ಯಂತ ಒಟ್ಟಾಗಿ ನೋಡಿದರೆ 35-40 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋಲಿ-ಕಬ್ಬಲಿಗರದೆ 6-7 ಲಕ್ಷ ಜನಸಂಖ್ಯೆ ಇದೆ. ಅದೇ ರೀತಿ ರಾಯಚೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ಮಂಗಳೂರು, ಉಡುಪಿ, ಕಾರವಾರ, ಮಂಡ್ಯ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಈ ಸುಮುದಾಯ ಹೊಂದಿದೆ.

ಇದು ಅಲ್ಲದೆ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರ್ಪಡೆಯಾಗಲು ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳು ಎಲ್ಲಾ ಅರ್ಹತೆ ಹೊಂದಿದ್ದರೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ಮತ್ತು ನಿರಾಸಕ್ತಿಯ ಕಾರಣದಿಂದ ಅನ್ಯಾಯಕ್ಕೆ ಒಳಗಾಗಿವೆ. ಇನ್ನು ಕಾಂತರಾಜು ವರದಿಯನುಸಾರ ಕೋಲಿ/ಕಬ್ಬಲಿಗ/ಬೆಸ್ತ ಜಾತಿಗಳನ್ನು ಕೇವಲ 14.5 ಲಕ್ಷ ಎಂದು ತೋರಿಸಿರುವುದರಿಂದ ಈ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದು ಅಲ್ಲದೆ ಬೆಸ್ತ, ಅಂಬಿಗ, ಗಂಗಾಮತ, ಕಬ್ಬೇರ್/ಕಬ್ಬೇರ, ಕಬ್ಬಲಿಗ ಮತ್ತು ಮೊಗವೀರ ಪರ್ಯಾಯ ಪದಗಳ ಜನಸಂಖ್ಯೆ ಪ್ರತ್ಯೇಕವಾಗಿ ತೋರಿಸಿರುವುದರಿಂದ ಆಯೋಗದ ಜನಸಂಖ್ಯೆಯ ವರದಿಯು ಈ ಸಮುದಾಯಕ್ಕೆ ತೀರಾ ಅನ್ಯಾಯವಾಗುತ್ತದೆ. ಇದನ್ನು ವಾಸ್ತವದ ಅಡಿಯಲ್ಲಿ ವೈಜ್ಞಾನಿಕವಾಗಿ ಕೋಲಿ/ಕಬ್ಬಲಿಗ/ಬೆಸ್ತ ಮತ್ತು ಇದರ ಪರ್ಯಾಯ ಪದಗಳನ್ನು ಒಟ್ಟಾಗಿಸಿ ವರದಿ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!