ಕುಡಿಯುವ ನೀರಿಗಾಗಿ ಕಣ್ಣೀರು ಸುರಿಸಿದ ಮಹಿಳೆ | ನಾಸರ್ ಜಂಗ್ ಏರಿಯಾಕ್ಕೆ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ವಾರ್ಡ್ ನಂ.8 ರ ವ್ಯಾಪ್ತಿಯಲ್ಲಿ ಬರುವ ನಾಸರ್ ಜಂಗ್ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ದಿನನಿತ್ಯ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿದ ಪ್ರಸಂಗ ಮಂಗಳವಾರ ನಡೆಯಿತು.
ನಾಸರ್ ಜಂಗ್ ಏರಿಯಾದಲ್ಲಿ ಕಳೆದ ಎರಡು ವರ್ಷಗಳಿಂದ ಪುರಸಭೆ ವತಿಯಿಂದ ಕುಡಿಯುವ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ, ಇದರಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ, ಸಮಸ್ಯೆ ಹೇಳಿದಾಗೊಮ್ಮೆ ಬಂದು ಹೋಗುತ್ತಾರೆ ಆದರೆ ಇಲ್ಲಿವರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಈಗ ಬೇಸಿಗೆ ಕಾಲ ಪ್ರಾರಂಭವಾಗಿದೆ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ದಿನ ಬಿಟ್ಟು ದಿನ ನೀರು ಬಿಡುತ್ತಾರೆ, ಆದರೆ ಬರಿ ಮುವತ್ತು ನಿಮಿಷ ಬೀಡುತ್ತಾರೆ. ಆದರೆ ನೀರೇ ಬರುವುದಿಲ್ಲ ಕೊಡ ನೀರಿಗಾಗಿ ಸುಮಾರು ಹೊತ್ತು ಕಾಯಬೇಕಾಗಿದೆ. ದೂರದಿಂದ ನೀರು ತರಲು ಹೋಗಿ ವೃದ್ದರು, ಚಿಕ್ಕ ಮಕ್ಕಳು ಬಿದ್ದು ಸಣ್ಣಪುಟ್ಟ ಅನಾಹುತಗಳಿಗೆ ತುತ್ತಾಗಿದ್ದಾರೆ ಎಂದು ಹೇಳುವ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾದ ಭಾರತಿ ಎಂಬ ಮಹಿಳೆ ಮುಖ್ಯಾಧಿಕಾರಿ ಸಮ್ಮುಖದಲ್ಲಿಯೇ ಕಣ್ಣೀರು ಸುರಿಸಿದ ಪ್ರಸಂಗ ನಡೆಯಿತು.
ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ನೀರು ಪೂರೈಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ, ನಾನು ಕರ್ತವ್ಯಕ್ಕೆ ಹಾಜರಾಗಿ ಒಂದು ವಾರವಾಗಿದೆ ಅಷ್ಟೇ, ನಿಮ್ಮ ಏರಿಯಾಕ್ಕೆ ಖುದ್ದಾಗಿ ಭೇಟಿ ನೀಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳಾದ ಲೋಹಿತ್ ಕಟ್ಟಿಮನಿ, ರೆಡ್ಡಿ, ಮಹಿಳೆಯರಾದ ಯಂಕಮ್ಮ, ಶ್ರೀದೇವಿ, ಚಂದ್ರಮ್ಮ, ನಾಗಮ್ಮ, ಲಕ್ಷ್ಮೀ ಸೇರಿದಂತೆ ಇತರರು ಇದ್ದರು.

