ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವ, ನಾಲವಾರ ಮಠ ಕಲಾವಿದರ ಆಶ್ರಯ ಧಾಮ: ನಟ ಶರಣ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ನನ್ನಂತಹ ಅನೇಕ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದ ಆಶ್ರಯಧಾಮ ಎಂದು ಕನ್ನಡ ಚಿತ್ರರಂಗದ ನಾಯಕ ನಟ ಶರಣ್ ಹೇಳಿದರು.
ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಜಾತ್ರಾಮಹೋತ್ಸವದ ಸಾಂಸ್ಕೃತಿಕ ಸಮಾರೋಪ ಸಮಾರಂಭದ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪಕ್ಕದ ಯಾದಗಿರಿಯ ಅಮೇರಿಕನ್ ಆಸ್ಪತ್ರೆ ಎಂದು ಕರೆಯಲ್ಪಡುತ್ತಿದ್ದ ಹೋಲ್ ಸ್ಟನ್ ಆಸ್ಪತ್ರೆಯಲ್ಲಿ ನನ್ನ ಜನನವಾಗಿದ್ದು, ಈ ಭಾಗಕ್ಕೆ ಬಂದಾಗಲೆಲ್ಲ ನನ್ನದೇ ಮನೆಗೆ ಬಂದ ಅನುಭವವಾಗುತ್ತದೆ. ಕಲಬುರಗಿ ಶರಣನ ಆಶೀರ್ವಾದ ಫಲದಿಂದ ನಾನು ಜನ್ಮತಾಳಿರುವೆ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಯ ಕಾರುಣ್ಯದಿಂದ ಚಿತ್ರರಂಗದಲ್ಲಿ ನೆಲೆಯೂರಿರುವೆ ಎಂದರು.
ನಾಲವಾರದ ಪೂಜ್ಯರ ಆಶೀರ್ವಾದ ಪಡೆದು ನಾನು ಛೂ ಮಂತರ್ ಎಂಬ ಸಿನಿಮಾ ಪ್ರಾರಂಭಿಸಿದೆ. ಶುಭಾವಾಗಲಿ ಎಂದು ಹರಸಿ ಆಶೀರ್ವಾದ ಮಾಡಿದ್ದರು. ಅವರು ನುಡಿದಂತೆ ಸಿನಿಮಾ ಯಶಸ್ವಿಯಾಯಿತು ಎಂದರು.
ಕನ್ನಡದ ಮೇರುನಟ ದಿ.ಡಾ.ರಾಜಕುಮಾರ, ಡಾ.ಅಂಬರೀಶ್ ಅಂತಹವರು ನಾಲವಾರ ಮಠದ ಜಾತ್ರೆಗೆ ಬಂದು ಧನ್ಯತೆಯ ಭಾವ ಅನುಭವಿಸಿದ್ದರು. ಅಂತಹ ಪಾವನ ವೇದಿಕೆಯ ಮೇಲೆ ನನಗೂ ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು.
ಉತ್ತರ ಕರ್ನಾಟಕ ಭಾಗದ ಜನರ ಅಭಿಮಾನ ಸಿಳ್ಳೆ-ಕೇಕೆಗಳೇ ಕನ್ನಡದ ಕಲಾವಿದರನ್ನು ಜೀವಂತವಾಗಿಟ್ಟಿವೆ. ನೀವು ತೋರುವ ಪ್ರೀತಿ ಬೆಲೆಕಟ್ಟಲಾಗದ್ದು ಎಂದು ಭಾವುಕರಾದರು.
ಹುಕ್ಕೇರಿ ಸಂಸ್ಥಾನದ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಹಿಂದಿಯ ಇಂಡಿಯನ್ ಐಡಲ್ ಹಾಗೂ ಕನ್ನಡದ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಕು.ಶಿವಾನಿ ಶಿವದಾಸ ಸ್ವಾಮಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ, ಸುರೇಶ ಸಜ್ಜನ್, ಮಹಾದೇವ ಗಂವ್ಹಾರ, ಶರಣಕುಮಾರ ಜಾಲಹಳ್ಳಿ, ಮಹೇಶಬಾಬು ಸುರ್ವೆ, ಗೋವಾ ಕನ್ನಡ ಸಂಘದ ಅಧ್ಯಕ್ಷ ಹಣಮಂತರೆಡ್ಡಿ ಶಿರೂರ, ಆನಂದ ಮದ್ರಿ, ಗೋಪಾಲ ರಾಠೋಡ ಇತರರು ಇದ್ದರು. ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.