ಕೃಷಿ ಭಾಗ್ಯ ಯೋಜನೆ ಅನುಷ್ಠಾನ ರೈತರಿಂದ ಅರ್ಜಿ ಆಹ್ವಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೃಷಿ ಭಾಗ್ಯ ಯೋಜನೆಯನ್ನು 2024-25 ನೇ ಸಾಲಿನಲ್ಲಿ ಚಿತ್ತಾಪುರ, ಕಾಳಗಿ ಮತ್ತು ಶಹಾಬಾದ ತಾಲೂಕುಗಳಲ್ಲಿ ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಚಿತ್ತಾಪುರ, ನಾಲವಾರ, ಗುಂಡಗುರ್ತಿ, ಕಾಳಗಿ ಹಾಗೂ ಶಹಾಬಾದ ಹೋಬಳಿಗಳಲ್ಲಿ ಸದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯ ಪ್ಯಾಕೇಜ್ ಮಾದರಿಯಲ್ಲಿದ್ದು ಕೃಷಿ ಹೊಂಡ, ಕ್ಷೇತ್ರ ಬದು, ಪಾಲಿಥಿನ್ ಹೋದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕ ಹಾಗೂ ತಂತಿ ಬೇಲಿ ಒಳಗೊಂಡಿರುತ್ತದೆ. ರೈತರು ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು, ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಅಥವಾ ಇತರೆ ಯೋಜನೆಗಳಡಿ ಕೃಷಿ ಹೊಂಡ ನಿರ್ಮಿಸಿರುವ ರೈತರಿಗೆ ಸದರಿ ಯೋಜನೆಯಡಿ ಪರಿಗಣಿಸಲಾಗುವುದಿಲ್ಲ. ನಿಗದಿಪಡಿಸಿದ ನಮೂನೆಯಲ್ಲಿ ಇದೇ ಸೆ.31 ರವರೆಗೆ ಅರ್ಜಿಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಿಗದಿಪಡಿಸಿದ ಗುರಿಗಿಂತಲು ಹೆಚ್ಚಿನ ಪ್ರಮಾಣದ ಅರ್ಜಿಗಳು ಸ್ವೀಕರಿಸಿದಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಜೇಷ್ಠತೆ ಆಧಾರದ ಮೇಲೆ ಫಲಾನುಭವಿಗಳನ್ನು ಅಂತಿಮಗೊಳಿಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.