ಲಾಡ್ಲಾಪುರ: ಜಾತ್ರಾ ಪೋಸ್ಟರ್ ಬಿಡುಗಡೆ, ಏ.17 ರಿಂದ ಹಾಜಿಸರ್ವರ್ (ಹಾದಿಶರಣ) ಜಾತ್ರೆ ಆರಂಭ
ನಾಗಾವಿ ಎಕ್ಸಪ್ರೆಸ್
ವಾಡಿ: ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಾಜಿಸರ್ವರ್ (ಹಾದಿಶರಣ) ಜಾತ್ರೆ ಉತ್ಸವ ಏ. 17 ರಿಂದ ಆರಂಭಗೊಳ್ಳಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಚಂದಪ್ಪ ಲಕಬಾ ತಿಳಿಸಿದ್ದಾರೆ.
ಲಾಡ್ಲಾಪುರ ಗ್ರಾಪಂ ಕಚೇರಿ ಆವರಣದಲ್ಲಿ ಜಾತ್ರಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಐದು ದಿನಗಳ ಕಾಲ ಅದ್ದೂರಿಯಾಗಿ ಜರುಗಿ ಆ ಮೂಲಕ ಜಿಲ್ಲೆಯಲ್ಲಿಯೇ ಗಮನ ಸೆಳೆಯುವ ಜಾತ್ರೆಗೆ ನಾಡಿನ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದರು.
ಏ. 17 ರಂದು ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 5 ಗಂಟೆವರೆಗೆ ಗಂಧದ ಮೆರವಣಿಗೆ, ಏ. 18 ರಂದು ಶುಕ್ರವಾರ ದೀಪೋತ್ಸವ ಹಾಗೂ ರಾತ್ರಿ 9.30 ರಿಂದ ಖವ್ವಾಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ. 19 ರಂದು ಶನಿವಾರ 4 ಗಂಟೆಯಿಂದ ರಾಜ್ಯ ಮತ್ತು ಹೊರರಾಜ್ಯದ ಕುಸ್ತಿಪಟುಗಳಿಂದ ಕೈಕುಸ್ತಿ ಜರುಗಲಿದೆ. ಏ. 21 ರಂದು ಸೋಮವಾರ ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಏ. 10 ರಿಂದಲೇ ಜಾತ್ರೆಯ ಸಿದ್ಧತೆ ಆರಂಭಗೊಳ್ಳಲಿದೆ ಎಂದರು. ಗ್ರಾಪಂ ವತಿಯಿಂದ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಹಾಗೂ ಚಿತ್ತಾಪುರ ಯಾದಗಿರಿ ಡಿಪೋದಿಂದ ವಿಶೇಷ ಬಸ್ ಗಳ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಸದಸ್ಯ ನಾಗೇಂದ್ರಪ್ಪ ಮುಕ್ತೇದಾರ ಮಾತನಾಡಿ, 5 ದಿನಗಳ ಕಾಲ ರಾಜ್ಯ ಹಾಗೂ ಹೊರರಾಜ್ಯದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸರ್ವಧರ್ಮ ಸಮನ್ವಯತೆ ಸಂದೇಶ ಸಾರುವ ಜತೆಗೆ ನೆತ್ತಿ ಸುಡುವ ಬಿಸಿಲಿನಲ್ಲಿ ಬೆಟ್ಟ ಹತ್ತಿ ಭಕ್ತಿಯ ಹರಕೆ ಸಲ್ಲಿಸುವುದು ಜಾತ್ರೆಯ ವಿಶೇಷತೆ ಇದೆ. ಕೂಲಿ ಕೆಲಸಕ್ಕಾಗಿ ವಲಸೆ ಹೋಗಿರುವ ಕಾರ್ಮಿಕರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮ ಹೆಚ್ಚಿಸುತ್ತಾರೆ ಎಂದರು.
ಉಪಾಧ್ಯಕ್ಷೆ ಲಕ್ಷ್ಮೀ ಮೌನೇಶ ದೊರೆ, ಸದಸ್ಯ ಸುಬ್ಬಣ್ಣ ವಡ್ಡರ, ಪ್ರಮುಖರಾದ ವಿಶ್ವನಾಥ ಗಂಧಿ, ಪೋಮು ರಾಠೋಡ, ಶಾಂತಕುಮಾರ ಎಣ್ಣಿ, ಚಂದಪ್ಪ ಲಕಬಾ, ಮೌನೇಶ ದೊರೆ, ಈರಣ್ಣ ಮಲ್ಕಂಡಿ, ಸಾಬಣ್ಣ ಆನೇಮಿ, ಸಾಬಣ್ಣ ಗೊಡಗ, ಬಾಬು ದಂಡಬಾ, ಮಲ್ಲಿಕಾರ್ಜುನ ಗಂಧಿ, ಶರಣಪ್ಪ ಪೂಜಾರಿ, ಸಾಬಣ್ಣ ಊಟಿ, ಮಾರ್ತಂಡಪ್ಪ ದಂಡೋತಿ, ಭೀಮರಾಯ ಚೂರಿ, ಸಾಬಣ್ಣ ಕುಂಬಾರಹಳ್ಳಿ, ಹಣಮಯ್ಯ ಕಲಾಲ, ನಾಗರಾಜ ದೇವರೇಳಕರ ಸೇರಿದಂತೆ ಇನ್ನಿತರರು ಇದ್ದರು.