ಧಾರ್ಮಿಕ ಶಿಕ್ಷಣ ವ್ಯಕ್ತಿತ್ವ ರೂಪಿಸಿದರೆ ಲೌಕಿಕ ಶಿಕ್ಷಣದಿಂದ ಉತ್ತಮ ಪ್ರಜೆ ಆಗುತ್ತಾರೆ: ಫಾದರ್ ಡಿಸೋಜ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ವಧರ್ಮದ ಸಂಪೂರ್ಣ ಅರಿವು ಮೂಡಿಸಿಕೊಂಡು ಇತರೆ ಧರ್ಮಗಳ ತಿಳಿದು ಪ್ರೀತಿಯಿಂದ ಕಾಣಲು ಸಹಾಯಕ ಆಗಬೇಕು ಇಂತಹ ವಾತಾವರಣದಿಂದ ಸಹಬಾಳ್ವೆ ಸಾಧ್ಯ. ಧಾರ್ಮಿಕ ಶಿಕ್ಷಣ ವ್ಯಕ್ತಿತ್ವ ರೂಪಿಸಿದರೆ ಲೌಕಿಕ ಶಿಕ್ಷಣದಿಂದ ದೇಶದ ಉತ್ತಮ ಪ್ರಜೆ ಆಗುತ್ತಾರೆ ಎಂದು ಮೋಕ್ಷ ರಾಣಿ ಚರ್ಚ್ ನ ಫಾದರ್ ಇವಾನ್ ಡಿಸೋಜ ಹೇಳಿದರು.
ಪಟ್ಟಣದ ಚಿತ್ತಾಶಾಹವಲಿ ದರ್ಗಾ ರಸ್ತೆಯ ಮಸಜಿದ್ ಯೇ ಕರಿಮನ್ನಿಸಾ ವತಿಯಿಂದ ಆಯೋಜಿಸಿದ್ದ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಚಿತ್ತಾಪುರದಲ್ಲಿ ಒಳ್ಳೆಯ ಭಾವೈಕ್ಯತೆಯ ವಾತಾವರಣ ಇದೆ ಇಲ್ಲಿಯ ಜನರ ಪ್ರೀತಿ, ಸಹಬಾಳ್ವೆ ಅನೋನ್ಯತೆ ಇತರರಿಗೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿ, ಇದೇ ರೀತಿ ಸಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.
ನಿವೃತ್ತ ಎನ್ಇಎಸ್ ಪ್ರೌಢಶಾಲೆಯ ಮುಖ್ಯಗುರು ಹಾಗೂ ಸಹಜ ಮಾರ್ಗದ ಅಧ್ಯಾತ್ಮಿಕ ಚಿಂತಕ ದೇವೇಂದ್ರಪ್ಪ ಶಾಲಿ ಮಾತನಾಡಿ, ಧರ್ಮಗ್ರಂಥ ಖುರಾನ್ ನಲ್ಲಿ ಇರುವ ಪ್ರಾಮಾಣಿಕತೆ, ಮುಂತಾದ ಅಂಶಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಬೇಕು. ನಮಾಜ್ ನಲ್ಲಿರುವ ಭಂಗಿ ಗಳು ವೈಜ್ಞಾನಿಕ ದೃಷ್ಟಿಕೋನ ಉಳ್ಳವು ಆಗಿವೆ ಎಂದರು.
ವೇದಿಕೆಯಲ್ಲಿ ಅಬ್ದುಲ್ ವಾಹಬ್ ಸಾಬ್, ಮುಫ್ತಿ ಯೂನಿಯಾನ್, ಮೌಲಾನಾ ಆಬಿದ್ ಹುಸೇನ್, ಮೌಲಾನಾ ಸಿದ್ಧಿಕಿ, ಅಬ್ದುಲ್ ರಹೀಮ್, ಇಕಬಾಲ್ ಸಾಬ್, ಗುರುಲಿಂಗಪ್ಪ ಅಲ್ಲಮ, ವಾಸುದೇವ್ ಗಂಜಿ, ಫಜಲ್ ಸೂತ ಪೇಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಕ್ಕಳ ಖುರಾನ ಹಾಗೂ ಹದೀಸ್ ಶ್ಲೋಕಗಳ,ಅರ್ಥ ಸಹಿತ ವಿವರಣೆ ಎಲ್ಲರ ಮನ ಅರಳಿಸಿ ಸಂತೃಪ್ತಿ ಮೂಡಿಸಿದವು ಅವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಮಸಜೀದ್ ನ ಸದರ್ ಗಣದವರು, ಪೇಶಮಾಮ, ಮೌಜನ್ಸಾಬ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಮುಸ್ತಾಕಸಾಬ್ ಮೌಲಾನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಝಾಕೀರ್ ವಂದಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
“ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು, ಪರಸ್ಪರ ಗೌರವ ನೀಡುವುದು, ತಂದೆ ತಾಯಿಗಳ ಆರೈಕೆ, ಧರ್ಮ ಗ್ರಂಥಗಳ ಅರಿವು ಮೂಡಿಸಲು ಸಂಸ್ಕೃತಿ, ಸಂಪ್ರದಾಯ ಕಾಪಾಡಿಕೊಂಡು ಬರಲು ಸತತ ಪ್ರಯತ್ನ ಮಾಡಲಾಗುತ್ತಿದೆ.”-ಮೌಲಾನಾ ಮುಸ್ತಾಕ ಸಾಬ್.