ಮಹಿಳಾ ಪದವಿಧರರಿಗೆ ಒಲಿದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಪಟ್ಟ, ಅಭಿವೃದ್ಧಿ ನಿರೀಕ್ಷೆಯಲ್ಲಿ ಪಟ್ಟಣದ ಜನತೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಮಹಿಳಾ ಪದವಿಧರರಿಗೆ ಒಲಿದಿದ್ದು, ಪಟ್ಟಣದ ಜನತೆ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ. ಪುರಸಭೆ ಇತಿಹಾಸದಲ್ಲಿ ಮಹಿಳಾ ಪಧವಿದರರಿಬ್ಬರು ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲು ಹೀಗಾಗಿ ಇದು ವಿಶೇಷತೆ ಪಡೆದುಕೊಂಡಿದೆ.
ಪ.ಜಾ (ಮಹಿಳೆ) ಮೀಸಲಾತಿಯಡಿ ಕಾಂಗ್ರೆಸ್ ಪಕ್ಷದ ವಾರ್ಡ್ ನಂ.23 ರ ಸದಸ್ಯೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇವರು ಬಿಎ, ಬಿ.ಇಡಿ ಪಧವಿದರರಾಗಿದ್ದು ವಿಶೇಷ. ಮೀಸಲಾತಿ ಹಾಗೂ ಚುನಾವಣೆ ಘೋಷಣೆ ಆದಾಗಿನಿಂದಲೂ ನಾನು ಪದವಿಧರೆಯಾಗಿದ್ದು ಹಾಗೂ ಎರಡು ಬಾರಿ ಪುರಸಭೆ ಸದಸ್ಯೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿದ್ದರು. ಅವರ ನಿರೀಕ್ಷೆಯಂತೆ ಕೊನೆಗೂ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಎ (ಮಹಿಳೆ) ಮೀಸಲಾತಿಯಡಿ ಕಾಂಗ್ರೆಸ್ ಪಕ್ಷದ ವಾರ್ಡ್ ನಂ.10 ರ ಸದಸ್ಯೆ ಅತೀಯಾ ಬೇಗಂ ನಜಿಮೋದ್ದಿನ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ, ಇವರು ಬಿಎ ಪದವಿಧರೆಯಾಗಿದ್ದು. ಇವರ ಅತ್ತೆಯವರಾದ ದಿ.ರಫಾತ್ ಫರ್ದನಾ ಅವರು ಈ ಹಿಂದೆ ವಾರ್ಡ್ ನಂ.15 ಮತ್ತು ವಾರ್ಡ್ ನಂ.10 ಈ ಎರಡು ವಾರ್ಡ್ ಗಳಿಂದ ಎರಡು ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಅದೇ ವಾರ್ಡ್ ನಂ.10 ರ ಸದಸ್ಯೆ ಅತೀಯಾ ಬೇಗಂ (ಸೊಸೆ) ಅವರು ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧಿಕಾರದ ಗದ್ದುಗೆಯಲ್ಲಿ ವಿದ್ಯಾವಂತರು ಕುಳಿತಾಗ ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಾಗಿರುತ್ತವೆ. ಹೀಗಾಗಿ ಪಟ್ಟಣದ ಅಭಿವೃದ್ಧಿ ನೋಡಲು ಜನರು ಕಾತುರರಾಗಿದ್ದಾರೆ. ಜನರ ನಿರೀಕ್ಷೆಯಂತೆ ನೂತನ ಅಧ್ಯಕ್ಷ ಉಪಾಧ್ಯಕ್ಷರು ಸೇವೆ ಸಲ್ಲಿಸಿದಾಗ ಮಾತ್ರ ಜನರ ಪ್ರೀತಿಗೆ ಪಾತ್ರರಾಗುತ್ತಾರೆ ಯಾವುದಕ್ಕೂ ಕಾದು ನೋಡಬೇಕಿದೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಮುಂದಿರುವ ಸವಾಲುಗಳು:
ತುಕ್ಕು ಹಿಡಿದ ಪುರಸಭೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು, ಈಗಿರುವ ಪುರಸಭೆ ಕಟ್ಟಡ ಡೆಮಾಲಿಶ್ ಮಾಡಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಪಟ್ಟಣದ ಸೌಂದರ್ಯ ಹೆಚ್ಚಿಸುವ ಕ್ರಮ ಕೈಗೊಳ್ಳುವುದು, ಪಟ್ಟಣದಲ್ಲಿ ಉದ್ಯಾನವನ ನಿರ್ಮಾಣ ಮಾಡುವುದು, ತರಕಾರಿ ಮಾರುಕಟ್ಟೆ ಮಳಿಗೆಗಳು, ವಾಣಿಜ್ಯ ಮಳಿಗೆಗಳು ಹಂಚಿಕೆ ಮಾಡುವುದು, ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು, ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಚರಂಡಿ ಸ್ವಚ್ಛತೆ ಮಾಡುವುದು, ದೂಳಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ದರಾಗಬೇಕಿದೆ.