ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ, ಜನರಿಗೆ ರಕ್ಷಣೆ ಕಲ್ಪಿಸದೆ ಸರ್ಕಾರ ಯಾವ ಭಾಗ್ಯ ಕೊಟ್ಟರೂ ನಿರರ್ಥಕ: ಬಾಲರಾಜ್ ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಜನರಿಗೆ ಮಾನ ಪ್ರಾಣದ ರಕ್ಷಣೆಯ ಭಾಗ್ಯ ಕಲ್ಪಿಸಲಾಗದಿದ್ದರೆ ಸರ್ಕಾರ ಯಾವ ಭಾಗ್ಯ ಕೊಟ್ಟರೂ ಅದು ನಿರರ್ಥಕ ಎಂಬ ಅರಿವು ಸರ್ಕಾರಕ್ಕಿರಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಹೇಳಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮೈಕ್ರೋ ಫೈನಾನ್ಸ್ ಹಾವಳಿ ಹಾಗೂ ವಸೂಲಾತಿ ದೌರ್ಜನ್ಯದಿಂದ ಸಾಲಗಾರ ಬಡವರು ತತ್ತರಿಸಿದ್ದು ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರು, ಕೃಷಿಕರು, ಸಣ್ಣ ಹಿಡುವಳಿದಾರ ರೈತರು, ಶ್ರಮಿಕ ವರ್ಗದವರು, ಬೀದಿ ಬದಿ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಸಾಲ ವಿತರಿಸಲಾಗುತ್ತಿದ್ದು ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಆರ್.ಬಿ.ಐ ನಿಯಮಗಳನ್ನು ಗಾಳಿಗೆ ತೂರಿ ಮೀಟರ್ ಬಡ್ಡಿ ದಂಧೆಕೋರರನ್ನು ಹತ್ತಿಕ್ಕುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಬಯಲಾಗಿದೆ. ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಬಡವರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಜರೂರು ಕ್ರಮ ಕೈಗೊಳ್ಳಬೇಕಿದೆ. ಕಾನೂನು ಹಾಗೂ ಗೃಹ ಇಲಾಖೆ ಈ ಸಂಬಂಧವಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ವಸೂಲಾತಿಗಿಳಿದು ಗುಂಡಾಗಿರಿ ಪ್ರದರ್ಶಿಸುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಎಷ್ಟು ಬಿಟ್ಟಿ ಭಾಗ್ಯಗಳನ್ನು ನೀಡಿದರೇನು? ಬಡವರನ್ನು ಮೈಕ್ರೋ ಫೈನಾನ್ಸ್ ನಂತಹ ಜಾಲದ ವ್ಯೂಹಕ್ಕೆ ಬಡವರು ಸಿಲುಕಿಕೊಂಡು ನರಳುತ್ತಿರುವ ಪರಿಸ್ಥಿತಿ ಉದ್ಭವಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಾಮಾಜಿಕ ಅಭದ್ರತೆಯಿಂದ ಹಾಗೂ ಶೇ.25 ಕ್ಕೂ ಹೆಚ್ಚು ಬಡ್ಡಿ ವಿಧಿಸಿ ಸಕಾಲದಲ್ಲಿ ಕಂತು ಪಾವತಿಸಲು ಸಾಧ್ಯವಾಗದವರ ಮೇಲೆ ಇನ್ನಷ್ಟು ಶುಲ್ಕಗಳನ್ನು ವಿಧಿಸಿ ಇದ್ದಬದ್ದ ಆಸ್ತಿಯನ್ನೆಲ್ಲ ಮಾರಿಕೊಳ್ಳುವ ಪರಿಸ್ಥಿತಿಯು ಈ ಮೈಕ್ರೋ ಫೈನಾನ್ಸ್ ಸಾಲ ನೀಡುವ ಜಾಲದಿಂದ ಉದ್ಭವಿಸಿದೆ. ಇಡೀ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾವಿರಾರು ಶಾಖೆಗಳು ತನ್ನ ಜಾಲಗಳನ್ನು ವಿಸ್ತರಿಸಿ ಅಮಾಯಕರು, ಕನಿಷ್ಠ ಆದಾಯದಿಂದ ಬದುಕುವವರನ್ನು ಆಯ್ದುಕೊಂಡು ಸಾಲ ನೀಡುವ ಮೂಲಕ ಅವರು ಸಾಲ ತೀರಿಸುವ ವ್ಯೂಹದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ದರೋಡೆಕೋರರು ಬೀದಿಗಿಳಿದು ಹಾಡು ಹಗಲೇ ಬ್ಯಾಂಕು ಲೂಟಿಯಲ್ಲಿ ತೊಡಗಿದ್ದಾರೆ. ರಾಜಾರೋಷವಾಗಿ ಪ್ರಯಾಣಿಕರಂತೆ ಬ್ಯಾಗುಗಳಲ್ಲಿ ಹಣ ಒಡವೆ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಲದ ಶೂಲಕ್ಕೆ ಸಿಲುಕಿರುವ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರದ ರಕ್ಷಣೆ ಸಿಗುತ್ತದೆ ಎಂದು ಜನರು ನಂಬಿಕೊಳ್ಳಲು ಹೇಗೆ ಸಾಧ್ಯ? ಇಂತವರಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಧೈರ್ಯ ಮೊದಲೇ ಇರುವುದಿಲ್ಲ, ಇನ್ನು ಪೊಲೀಸ್ ರಕ್ಷಣೆಗೆ ದೂರು ನೀಡಿದರೂ ಅದನ್ನು ಗಂಭೀರವಾಗಿ ಸ್ವೀಕರಿಸುವ ಮನೋಭಾವ ಪ್ರದರ್ಶಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಬಡವರ ರಕ್ಷಣೆಗೆ ಈ ಕೂಡಲೇ ಸರ್ಕಾರ ಧಾವಿಸಿ ಬರಲಿ, ಮೈಕ್ರೋ ಫೈನಾನ್ಸ್ ಜಾಲದ ದೌರ್ಜನ್ಯಗಳನ್ನು ಹತ್ತಿಕಲು ಸಾಧ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಅಮಾಯಕರ ರಕ್ಷಣೆಗೆ ಮುಂದಾಗಬೇಕು ಎಂದು ಗುತ್ತೇದಾರ ಆಗ್ರಹಿಸಿದ್ದಾರೆ.