ರೂ.1,085 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ | ಮಾ.8 ರಂದು ಚಿತ್ತಾಪುರಕ್ಕೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ, 15 ಸಾವಿರ ಜನರು ಭಾಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರೂ.1,085 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭವನ್ನು ಪಟ್ಟಣದ ಮಳಖೇಡ ರಸ್ತೆಯ ಸೇಂದಿ ಡಿಪೋ ಮೈದಾನದಲ್ಲಿ ಮಾ.8 ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಈ ಸಮಾರಂಭದಲ್ಲಿ 15 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೇ ಕಲಬುರಗಿ ಜಿಲ್ಲೆಯ ಶಾಸಕರು, ನಿಗಮ ಮಂಡಳಿಯ ಅಧ್ಯಕ್ಷರುಗಳು ಭಾಗವಹಿಸುತ್ತಾರೆ. ಹೀಗಾಗಿ ಚಿತ್ತಾಪುರ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದ ಅಭಿವೃದ್ಧಿಗೆ 1085 ಕೋಟಿ ಅನುದಾನ ತಂದಿದ್ದು, ಇದರಲ್ಲಿ ರೂ.1,000 ಕೋಟಿ ವೆಚ್ಚದ ಹೊಸ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಮೂಲಕ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲಿದ್ದಾರೆ ಹಾಗೂ ರೂ.85 ಕೋಟಿ ಮೊತ್ತದ ವಿವಿಧ ಜನಪರ ಯೋಜನೆಗಳನ್ನು ಅಂದೇ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕೋರಿದ್ದಾರೆ.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ಹಾಗೂ ದಂಡೋತಿ ಕಾಗಿಣಾ ನದಿ ಬ್ರಿಜ್, ಹೊನಗುಂಟಿ ಬ್ರಿಜ್ ಅಡಿಗಲ್ಲು, ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ವಿಜ್ಞಾನ ಕೇಂದ್ರ ಸೇರಿದಂತೆ ಹತ್ತಾರು ಕಾಮಗಾರಿಗಳ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ರೂ.1085 ಕೋಟಿ ಇಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಯ ನಕ್ಷೆಯನ್ನು ಬದಲಾಯಿಸಿದ ಕೀರ್ತಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಸಚಿವರು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ 1 ರಿಂದ 4 ಕೋಟಿ ಅನುದಾನ ನೀಡಿದ್ದಾರೆ ಹೀಗಾಗಿ ಪ್ರತಿಯೊಂದು ಗ್ರಾಮದಿಂದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಪ್ರಮುಖರಾದ ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ವೀರುಪಾಕ್ಷಪ್ಪ ಗಡ್ಡದ್, ಚಂದ್ರಶೇಖರ ಕಾಶಿ, ಶಾಂತಣ್ಣ ಚಾಳೀಕಾರ, ನಾಗಯ್ಯ ಗುತ್ತೇದಾರ, ಮಲ್ಲಪ್ಪ ಹೊಸಮನಿ, ಶಿವರಾಜ್ ಕಲಗುರ್ತಿ, ಜಯಪ್ರಕಾಶ್ ಕಮಕನೂರ, ಕುಂದನ್ ಸಿಂಗ್, ದೇವು ಯಾಬಾಳ, ಸಂಜಯ ಬುಳಕರ್, ಶರಣು ಡೋಣಗಾಂವ, ರವಿಸಾಗರ ಹೊಸಮನಿ, ರಾಜಣ್ಣ ಕರದಾಳ, ವಿನ್ನುಕುಮಾರ ಜಡಿ, ಬಾಗು ದೊರೆ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

