ಮೋದಿ ಟ್ರಂಪ್ ಗುಲಾಮ ಅಲ್ಲ ಖರ್ಗೆ ಅವರೇ ಸೋನಿಯಾ ಗಾಂಧಿ ಗುಲಾಮರು: ಸಜ್ಜನಶೆಟ್ಟಿ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ರಂಪ್ ಗುಲಾಮ ಎಂದು ಹೇಳಿ ಅವಮಾನಿಸಿದ್ಜು ಖಂಡನೀಯ, ಮೋದಿ ಟ್ರಂಪ್ ಗುಲಾಮ ಅಲ್ಲ ನೀವೇ ಸೋನಿಯಾ ಗಾಂಧಿ ಗುಲಾಮರಾಗಿದ್ದಿರಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿರುಗೇಟು ನೀಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಃ ಖರ್ಗೆ ಅವರೇ ಗುಲಾಮರಾಗಿದ್ದು ಮೋದಿ ಟ್ರಂಪ್ ಗುಲಾಮರೆಂದು ಹೇಳಿರುವುದಕ್ಕೆ ಉಗ್ರವಾಗಿ ಖಂಡಿಸಲಾಗುವುದು. ಸಂವಿಧಾನದತ್ತ ಪ್ರಮುಖವಾದ ಪ್ರಧಾನಮಂತ್ರಿ ಹುದ್ದೆಗೆ ಅಗೌರವವಾಗಿ ಏಕೆ ವಚನದಲ್ಲಿ ಮಾತನಾಡುವುದು ಖರ್ಗೆ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಬರುವುದಿಲ್ಲ ಎಂಬ ಮಾಹಿತಿ ಇದ್ದರೂ ಸಹ ಜನರನ್ನು ಸೇರಿಸಲು ಸುಮ್ಮನೆ ಸಿಎಂ ಬರಲಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಅಂದು ಭಾನುವಾರ ಇದ್ದರೂ ಸಹ ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಎಲ್ಲಾ ಸಿಬ್ಬಂದಿಗಳು ಭಾಗವಹಿಸಬೇಕೆಂದು ಹೇಳಿ ವಾಮಮಾರ್ಗದಿಂದ ಜನರನ್ನು ಸೇರಿಸಿದ್ದಾರೆ ಎಂದು ಹೇಳಿದರು. ಸಾವಿರ ಮನೆಗಳ ಉದ್ಘಾಟನೆ ಮತ್ತು ಹಕ್ಕು ಪತ್ರ ವಿತರಣೆ ನಾಲ್ಕು ಬಾರಿ ಮಾಡಿ ಜನರ ದಿಕ್ಕು ತಪ್ಪಿಸಿದ್ದಾರೆ. ಮಾಡಿದ ಅಡಿಗಲ್ಲು ಮತ್ತೇ ಮತ್ತೇ ಉದ್ಘಾಟಿಸುತ್ತಾರೆ ಎಂದು ಆರೋಪಿಸಿದರು.
ಕಲಬುರಗಿ ಸಂಸದರು ಎರಡು ವರ್ಷಗಳಿಂದ ಎಲ್ಲಿದ್ದಾರೆ, ಒಮ್ಮೆ ಅಭಿನಂದನಾ ಸಮಾರಂಭಕ್ಕೆ ಚಿತ್ತಾಪುರಕ್ಕೆ ಬಂದವರು ಇಲ್ಲಿವರೆಗೆ ಬಂದಿಲ್ಲ ಅವರನ್ನು ದಿಗ್ಬಂಧನಲ್ಲಿ ಇಟ್ಟಿದಾರೆಯೇ ಎಂದು ವ್ಯಂಗ್ಯವಾಡಿದರು.
ಬೋಲೋ ಭಾರತ್ ಮಾತಾ ಕೀ ಜೈ ಎನ್ನುವ ಜೈಘೋಷ ನಮ್ಮದು ಆದರೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಥಮ ಬಾರಿಗೆ ಬೋಲೋ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿರುವುದು ನಮಗೆ ಖುಷಿ ತಂದಿದೆ ಹಾಗೂ ಇದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. ಸೋನಿಯಾ ಗಾಂಧಿ ಕೀ, ರಾಹುಲ್ ಗಾಂಧಿ ಕೀ ಜೈ ಎನ್ನುವ ಕಾಂಗ್ರೆಸ್ ನವರ ಬಾಯಲ್ಲಿ ಬೋಲೋ ಭಾರತ್ ಮಾತಾ ಕೀ ಜೈ ಎನ್ನುವ ಘೋಷ ಬಂದಿರುವುದು ವಿಶೇಷ ಇದು ಬದಲಾವಣೆ ಸಂಕೇತ ಎಂದು ಸಜ್ಜನಶೆಟ್ಟಿ ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಬಳಸಿಕೊಂಡ ಖರ್ಗೆ ಅವರು, ಅಭಿವೃದ್ಧಿ ಬಗ್ಗೆ ಮಾತನಾಡಲಿ ಸ್ವಾಗತಿಸುತ್ತೇವೆ ಆದರೆ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಭಾಷಣ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಇದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು.
ಸಚಿವರು ಮಾಡಿದ ಅಡಿಗಲ್ಲುಗಳನ್ನೇ ವರ್ಷದಲ್ಲಿ ಮೂರು ಮೂರು ಬಾರಿ ಮತ್ತೇ ಅದೇ ಅಡಿಗಲ್ಲು ಹಾಕುತ್ತಿದ್ದಾರೆ ಹೊರತು ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ, ಮೂಲಭೂತ ಸೌಲಭ್ಯಗಳು ನೀಡುತ್ತಿಲ್ಲ. ಐಟಿಬಿಟಿ ಸಚಿವರಾಗಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ, ಸ್ಥಳೀಯ ಸಿಮೆಂಟ್ ಕಂಪನಿಗಳಲ್ಲಿ ಜಮೀನು ಕೊಟ್ಟ ಎಷ್ಟು ಜನ ರೈತರ ಮಕ್ಕಳಿಗೆ ಉದ್ಯೋಗ ನೀಡಿದ್ದೀರಿ ಎಂದು ಹೇಳಲಿ ಎಂದು ಸವಾಲು ಹಾಕಿದರು. ದಲಿತರಿಗಾಗಿ ಮೀಸಲಿಟ್ಟ ಅನುದಾನ ಪಂಚ ಗ್ಯಾರಂಟಿಗಳಿಗೆ ಬಳಸಿಕೊಂಡ ಮೇಲೆ ಮೀಸಲಾತಿ ಅರ್ಥವೇನು, ದಲಿತರ ಹಣವನ್ನು ಲೂಟಿ ಮಾಡಿದ ಭ್ರಷ್ಟ ಸರ್ಕಾರ ಅದು ಕಾಂಗ್ರೆಸ್ ಸರ್ಕಾರ ಎಂದು ಕಟುವಾಗಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಅವಂಟಿ, ಮಲ್ಲಿಕಾರ್ಜುನ ಎಮ್ಮೆನೋರ್, ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ, ಸುರೇಶ್ ರಾಠೋಡ, ನಾಗರಾಜ ಹೂಗಾರ, ರಮೇಶ್ ಬೊಮ್ಮನಳ್ಳಿ, ದೀಪಕ್ ಹೊಸ್ಸುರಕರ್, ಶಾಮ್ ಮೇಧಾ, ಆನಂದ ಇಂಗಳಗಿ, ಶಿವರಾಮ್ ಚವ್ಹಾಣ ಇದ್ದರು.

