ಚಿತ್ತಾಪುರ ಹೊಂಗಿರಣ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಸಂಘಗಳಿಗೆ ಸರ್ಕಾರದ ಸೌಲಭ್ಯಗಳು ಒದಗಿಸಲು ಮಹ್ಮದ್ ಇಬ್ರಾಹಿಂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಡಿ.ಎಂ.ಎಫ್. ಯೋಜನೆ ಅಡಿಯಲ್ಲಿ ಹೊಂಗಿರಣ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹಿರಿಯ ನಾಗರಿಕರ ಅರಿವು ಕಾರ್ಯಕ್ರಮ ಮತ್ತು ಸಾಧನಾ ಸಲಕರಣೆಗಳನ್ನು ಗುರುತಿಸಲು ನಮ್ಮ ಸಂಘಕ್ಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
2007-08ನೇ ಸಾಲಿನಲ್ಲಿ ತಾಲೂಕಿನಲ್ಲಿ ಹೊಂಗಿರಣ ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘ ಚಿತ್ತಾಪುರ ಹಾಗೂ ತಾಲೂಕಾ ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಸಂಘ ಚಿತ್ತಾಪುರ ಸಂಘಗಳನ್ನು ರಚಿಸಿಕೊಂಡು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತವೆ. ಆದರೆ ಇನ್ನುವರೆಗೆ ನಮಗೆ ಸರ್ಕಾರದಿಂದ ಯಾವುದೇ ತರಹದ ಸೌಲಭ್ಯ ಸಹ ಸಿಕ್ಕಿರುವುದಿಲ್ಲ. ಆದರೆ ನಾವು ನಮ್ಮ ಸಂಘದ ಅಡಿಯಲ್ಲಿ ಹೊಲಿಗೆ ತರಬೇತಿ, ಎಂಬ್ರಾಯಿಡಿಂಗ್, ಕಂಪ್ಯೂಟರ್ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಮ್ಮ ಸಂಘದ ಸ್ವಂತ ಆಸಕ್ತಿಯಿಂದ ಮಾಡಿರುತ್ತೇವೆ. ಹಾಗೂ ನಾವು ಅನೇಕ ಸಾಮಾಜಿಕ ಪರ ಕೆಲಸಗಳನ್ನು ಮಾಡುತ್ತಿದ್ದೇವೆ ಆದರೂ ನಮ್ಮ ಸಂಘಕ್ಕೆ ಯಾವುದೇ ಸೌಲಭ್ಯ ದೊರಕಿರುವುದಿಲ್ಲ.
ಆದಕಾರಣ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಆದಷ್ಟು ಬೇಗನೆ ನಮ್ಮ ಸಂಘಕ್ಕೆ ಸೌಲಭ್ಯ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.