ನಾಗಾವಿ ಇತಿಹಾಸ ಮರೇಮಾಚುವ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಡೆಗೆ ಸಿಡಿದೆದ್ದ ಯುವಕರು, ಸ್ಥಳದ ಉತ್ಪನನ ನಡೆಸಿ, ಸತ್ಯಶೋಧನೆ ಕೈಗೊಳ್ಳಲು ನಾಗಾವಿ ಹಿತರಕ್ಷಣಾ ಸಮಿತಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಗಾವಿ ವಿಶ್ವವಿದ್ಯಾಲಯ ಪರಿಸರಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆಯ ಮರುಪರಿಶೀಲನೆ ಮಾಡುವುದು ಹಾಗೂ ಸ್ಥಳದ ಉತ್ಪನನ ನಡೆಸಿ, ಸತ್ಯಶೋಧನೆ ಕೈಗೊಳ್ಳಬೇಕು ಎಂದು ನಾಗಾವಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಖಂಡರು ತಹಸೀಲ್ ಕಚೇರಿಯ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಸಮಿತಿಯ ಅದ್ಯಕ್ಷ ಅಶ್ವಥರಾಮ್ ರಾಠೋಡ ಮಾತನಾಡಿ, ಚಿತ್ತಾಪುರ ತಾಲೂಕಿನ ಐತಿಹಾಸಿಕ, ಪೌರಾಣಿಕ ಮತ್ತು ಪಾರಂಪರಿಕ ಕ್ಷೇತ್ರವಾದ ನಾಗಾವಿಯಲ್ಲಿ ಕಳೆದ ಕೆಲವು ದಿನಗಳಿಂದ ನವೀಕರಣ ನಡೆಯುತ್ತಿರುವುದು ಅತ್ಯಂತ ಹರ್ಷದಾಯಕವಾಗಿದೆ ಆದರೆ ಇತಿಹಾಸ ಮರೇಮಾಚುವ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ಪ್ರಾಚ್ಯವಸ್ತು ಇಲಾಖೆಯ ಲಿಖಿತ ಬರಹದಲ್ಲಿ ಕೊಟ್ಟಿರುವಂತೆ ಯಾವುದೇ ಸತ್ಯಶೋಧನೆ, ಉತ್ಖನನ, ಪರಿಶೀಲನೆ ಹಾಗೂ ಸಂಶೋಧನೆಗಳಿಲ್ಲದೆ ಒಂದು ನಿರ್ದಿಷ್ಟ ಸ್ಥಳವನ್ನು ಕಾಲಿ ಮಸೀದಿ ಎಂದು ನಾಮಕರಣ ಮಾಡಿ, ಪ್ರತ್ಯೇಕವಾಗಿ ಆ ಸ್ಥಳವನ್ನು ಗೆಜೆಟ್ ಅಧಿಸೂಚನೆಯಲ್ಲಿ ಕಾಲಿ ಮಸೀದಿ ಎಂದು ನಾಮಕರಣ ಮಾಡಿ, ಕಾಮಗಾರಿಯನ್ನು ನಡೆಸಲಾಗುತ್ತಿದೆ. ಆದರೆ ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈಗಾಗಲೇ ಏಳು ಹೆಡೆಯ ಸರ್ಪ (ನಾಗಾಮೂರ್ತಿ) ತ್ರಿಶೂಲ, ಕಮಲ, ಹೆಬ್ಬಾಗಿಲಿಗೆ ಗಜಲಕ್ಷ್ಮಿಯ ಕೆತ್ತನೆಗಳನ್ನು ಒಳಗೊಂಡಂತೆ ಇನ್ನೂ ಅನೇಕ ಹಿಂದೂ-ಸನಾತನ ಧರ್ಮದ ಕುರುಹುಗಳು ಪತ್ತೆಯಾಗಿವೆ ಎಂದು ಹೇಳಿದರು.
ಸಮಿತಿ ಗೌರವಾದ್ಯಕ್ಷ ರವಿಂದ್ರ ಸಜ್ಜನಶೆಟ್ಟಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪಟ್ಟಣದಲ್ಲಿ ಕಾಲಿ ಮಸೀದಿ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ಸರ್ಕಾರ ಮುಸ್ಲೀಂ ಲೀಗ್ ಸರ್ಕಾರದಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದರು. ಕರ್ನಾಟಕ ಕ್ಕೆ ಮುಸ್ಲಿಂರು ಬರುವ ಮುಂಚೆಯೇ ಇಲ್ಲಿ ಕಾಳಿ ಮಾತಾ ದೇವಸ್ಥಾನ ಇತ್ತು ಇದೊಂದು ಪುರಾತನ ದೇವಸ್ಥಾನ ಆಗಿದೆ ಹೀಗಿರುವಾಗ ಕಾಲಿ ಮಸೀದಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈಗ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಅಲ್ಲಿನ ನಾಗಾ ಮೂರ್ತಿಗಳು, ಅವಶೇಷಗಳ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಆದ್ದರಿಂದ ಈ ಕೂಡಲೇ ಗೆಜೆಟ್ ಅಧಿಸೂಚನೆಯಲ್ಲಿ ನಮೂದಿಸಿರುವ ಮಸೀದಿ ಎಂಬ ಶಬ್ದವನ್ನು ಮರುಪರಿಶೀಲನೆ ಮಾಡಿ, ಹೊಸ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಅಲ್ಲಿ ದೊರಕಿರುವ ಕುರುಹುಗಳನ್ನು ಅಲ್ಲಿಯೇ ರಕ್ಷಿಸಬೇಕು. ಪೂರ್ಣಪ್ರಮಾಣದಲ್ಲಿ ವೈಜ್ಞಾನಿಕವಾಗಿ ಉತ್ಖನನ ಮಾಡಿ, ಸಂಶೋದನೆ ಕೈಗೊಳ್ಳಬೇಕು. ಅಲ್ಲದೇ ಸ್ಥಳಿಯರನ್ನೊಳಗೊಂಡ ಸತ್ಯಶೋಧನಾ ಸಮೀತಿ ರಚಿಸಿ, ನಾಗಾವಿ ವಿಶ್ವವಿದ್ಯಾಲಯವನ್ನು ಮರು ಸ್ಥಾಪನೆಗೊಳಿಸಬೇಕೆಂದು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ವೀರಣ್ಣ ಯಾರಿ ಮಾತನಾಡಿ, ಸ್ಥಳ ಪುರಾಣ ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ ನಾಗರಾಜನನ್ನು ಗರುಡನ ವೇಷದಲ್ಲಿದ್ದ ರಾಕ್ಷಸನು ಎತ್ತಿಕೊಂಡು ಹೋಗುವಾಗ ಆ ನಾಗರಾಜನ ರಕ್ಷಣೆಗಾಗಿ ದೇವಿ ಯಲ್ಲಮ್ಮಳು ಅವತಾರ ಎತ್ತಿ, ನಂತರ ಕಾಳಿಯಾಗಿ ಆ ಗರುಡ ವೇಷದಲ್ಲಿದ್ದ ರಾಕ್ಷಸನನ್ನು ಕೊಂದಳು. ಈ ಘೋರ ಕಾಳಗ ನಡೆದದ್ದು ಇದೇ ನಾಗಾವಿ ಕ್ಷೇತ್ರದಲ್ಲಿ. ಈ ಕದನದಲ್ಲಿ ಕಾಳಿ ರೂಪ ತಾಳಿದ ತಾಯಿ ಯಲ್ಲಮ್ಮಳನ್ನು ಅನುಸರಿಸಿದ್ದು, ಶಿವನ ವಾಹನ ನಂದಿ. ಆದ್ದರಿಂದಲೇ ಇಂದಿಗೂ ಸಹ ನಂದಿ ಭಾವಿಯ ಪಕ್ಕದಲ್ಲಿ ನಂದಿ ವಿಗ್ರಹ ಮತ್ತು ಉತ್ಖನನ ನಯುತ್ತಿರುವ ಸ್ಥಳದಲ್ಲಿರುವ ಕಾಳಿ ಮಾತೆಯ ಮಂದಿರ ಸ್ಥಾಪಿತವಾಗಿದೆ. ಈ ಹಿನ್ನೆಲೆಯಲ್ಲಿ ಅವತಾರ ತಾಳಿದ ಸ್ಥಳವನ್ನು ನಾಗಾವಿ ಕ್ಷೇತ್ರ ಎಂತಲೂ ಕರೆಯುತ್ತಾರೆ.
ಇಂತಹ ಅಮೋಘ ಹಿನ್ನೆಲೆಯುಳ್ಳ ಕ್ಷೇತ್ರ ಮತ್ತು ದೇವಿಯನ್ನು ಅಂದಿನ ರಾಷ್ಟ್ರಕೂಟರ ಹಾಗೂ ಕಲ್ಯಾಣಿಯ ಚಾಲುಕ್ಯ ಅರಸು ವಂಶದವರು ಕುಲದೇವಿಯನ್ನಾಗಿ ಹೊಂದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ, ಪುಣ್ಯ ಕ್ಷೇತ್ರವಾದ್ದರಿಂದಲೇ ಅದನ್ನು ವಿಶ್ವವಿದ್ಯಾಲಯವನ್ನಾಗಿ ಅಭಿವೃದ್ಧಿ ಪಡಿಸಿದರು. ಈ ಹಿನ್ನೆಲೆಯುಳ್ಳ ಸ್ಥಳದಲ್ಲಿ ದೊರಕುತ್ತಿರುವ ಕುರುಹುಗಳು ಮತ್ತು ಸ್ಥಳ ಮಹಾತ್ಮಯ ಹಿನ್ನೆಲೆಗಳು ಒಂದಕ್ಕೊಂದು ಪೂರಕವಾಗಿವೆ. ಸ್ಥಳವು ಯಾವುದೇ ಕಾಲದಲ್ಲಿ ಅನ್ಯರ ವಶದಲ್ಲಿ ಇರುವುದಕ್ಕೆ ಇಂದಿನವರೆಗೆ ದಾಖಲೆಗಳು ಅಥವಾ ಕುರುಹುಗಳು ಇರುವುದಿಲ್ಲ. ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಅಥವಾ ಸೂಕ್ತ ಉತ್ಪನನ ನಡೆಸದೇ ಗೆಜೆಟ್ ನಲ್ಲಿ ಕಾಲಿ ಮಸೀದಿ ಎಂದು ನಮೂದಿಸಿ, ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು ಕೇವಲ ಚಿತ್ತಾಪುರ ತಾಲೂಕಿನ ಸಮಸ್ತ ನಾಗಾವಿ ಯಲ್ಲಮ್ಮ ದೇವಸ್ಥಾನದ ಸದ್ಭಕ್ತರಿಗೆ ಮಾತ್ರವಲ್ಲದೇ ಇಡಿ ಕರ್ನಾಟಕ ಮತ್ತು ಹೊರ ರಾಜ್ಯದ ದೇವಿ ಭಕ್ತರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಹೇಳಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಶಾಂತಿ ಇರುವ ಚಿತ್ತಾಪುರ ಪಟ್ಟಣದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು ಈ ಕುರಿತು ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ನೈಜತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶ್ರೀನಿವಾಸ ಹಳ್ಳಿ, ಪ್ರಲ್ಹಾದ್ ವಿಶ್ವಕರ್ಮ, ಸಂತೋಷ ಹಾವೇರಿ, ಆನಂದ ಪಾಟೀಲ ನರಿಬೋಳ, ಮೇಘರಾಜ ಗುತ್ತೇದಾರ, ಶರಣು ಅಲ್ಲೂರಕರ್, ಮಲ್ಲಿಕಾರ್ಜುನ ಅಲ್ಲೂರಕರ್, ರಮೇಶ್ ಬೊಮ್ಮನಳ್ಳಿ, ಅಜಯ್ ಬಿದರಿ, ಸಚ್ಚಿದಾನಂದ, ಶಾಮ್ ಮೇದಾ, ಸಂತೋಷ ಹಾವೇರಿ, ಮಹಾದೇವ ಅಂಗಡಿ, ರೆಡ್ಡಿ ಬಂಜಾರ, ವಿಜಯಕುಮಾರ ಯಾಗಾಪೂರ, ಗುಂಡು ಮತ್ತಿಮುಡ್, ಶ್ರೀಕಾಂತ್ ಸುಲೇಗಾಂವ, ಚಂದ್ರಶೇಖರ ಉಟಗೂರ, ಬಸವಂತರಾವ ಮಾಲಿ ಪಾಟೀಲ, ಬಸವರಾಜ ಹೂಗಾರ, ಶಿವರಾಮ ಚವ್ಹಾಣ, ಸಾಬಣ್ಣ ಮಡಿವಾಳ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.