ಚಿತ್ತಾಪುರ: ನಾಗಾವಿ ಹತ್ತಿರದ ಸಾವಿರ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮನೆಗಳು ಹಂಚಿಕೆ ಮಾಡಲು ಎಂಎಲ್ಸಿ ತಳವಾರ ಸಾಬಣ್ಣ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಬೆಳಗಾವಿ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಗಾವಿ ಹತ್ತಿರದಲ್ಲಿ ನಿರ್ಮಾಣವಾಗಿರುವ 1000 ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣ ಅವರು ವಸತಿ, ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸಚಿವರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಗಾವಿ ಹತ್ತಿರದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ ಆಡಿ ಸರ್ಕಾರದ ವಿವಿಧ ವಸತಿ ಯೋಜನೆಗಳಾದ ಡಾ. ಬಿ.ಆರ್. ಅಂಬೇಡ್ಕರ್ ಅವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯನ್ನು ಸಮನ್ವಯಗೊಳಿಸಿ ರೂ. 58 ಕೋಟಿ ವೆಚ್ಚದಲ್ಲಿ ಚಿತ್ತಾಪುರ ಪಟ್ಟಣದ ಸರ್ವೆ ನಂಬರ್ 345/1/2 ರಲ್ಲಿ 680 ಮನೆಗಳು, ಸರ್ವೆ ನಂಬರ್ 3021/2/5 ರಲ್ಲಿ 320 ಮನೆ ಸೇರಿ ಒಟ್ಟು 1000 ಮನೆಯನ್ನು ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಾರ್ಗ ಸೂಚಿಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಹೊರತುಪಡಿಸಿ ಉಳಿದ ಫಲಾನುಭವಿಗಳಿಗೆ ವಂತಿಕೆ ಪಡೆಯಲು ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಮಾತ್ರ ತಾತ್ಕಾಲಿಕ ಹಂಚಿಕೆ ಪತ್ರ ವಿತರಿಸಲಾಗಿದೆ. ಯಾವುದೇ ಹಕ್ಕು ಪತ್ರವನ್ನು ವಿತರಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.
ಫಲಾನುಭವಿಗಳು ತಮ್ಮ ವಂತಿಕೆ ಹಣವನ್ನು ಪಾವತಿಸಿದ್ದಾರೆ. 1600 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯ ಕಟ್ಟಡ ನಿರ್ಮಿಸಲಾಗಿದೆ. ಪ್ರತಿ ಮನೆಗೆ 400 ಚದರ ಅಡಿ ವಿಸ್ತೀರ್ಣದ ಜಾಗ ಬಳಸಲಾಗಿದೆ. ಒಂದು ಕಟ್ಟಡದಲ್ಲಿ ನೆಲಮಹಡಿಯಲ್ಲಿ ನಾಲ್ಕು ಕುಟುಂಬಗಳು, ಮೊದಲ ಮಹಡಿಯಲ್ಲಿ ನಾಲ್ಕು ಕುಟುಂಬಗಳ ವಾಸಕ್ಕೆಂದು ಒಟ್ಟು ಎಂಟು ಮನೆ ನಿರ್ಮಿಸಲಾಗಿದೆ. ಪ್ರತಿ ಮನೆಯ ಅಡುಗೆ ಕೋಣೆ, ಶೌಚಾಲಯ ಕೋಣೆ, ಸ್ನಾನದ ಕೋಣೆಗೆ ಇನ್ನೂ ಬಾಗಿಲು ಅಳವಡಿಸಿಲ್ಲ, ಮನೆಗಳ ಕಿಟಕಿಗಳಿಗೆ ಗಾಜು ಅಳವಡಿಸಿಲ್ಲ. ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ, ಗಾರ್ಡನ್, ಆಟದ ಮೈದಾನ, ಸಮುದಾಯ ಭವನ ನಿರ್ಮಿಸಿಲ್ಲ, ಕುಡಿಯುವ ನೀರು ಪೂರೈಕೆಯ ವ್ಯವಸ್ಥೆಯನ್ನು ಮಾಡಿಲ್ಲ. ಈ ಎಲ್ಲಾ ಆಗತ್ಯ ಮೂಲ ಸೌಲಭ್ಯ ಅಭಿವೃದ್ಧಿಗಾಗಿ ಮತ್ತು ಮನೆಗಳ ಹಂಚಿಕೆಗಾಗಿ ಫಲಾನುಭವಿಗಳು ಭರವಸೆಯಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ನಾಗಾವಿ ಹತ್ತಿರ ನಿರ್ಮಾಣವಾಗಿರುವ 1000 ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ, ಕುಡಿಯುವ ನೀರಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಬಡ ಜನರು ನೆಮ್ಮದಿಯ ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.