ನಾಲವಾರ ಶ್ರೀಮಠದಲ್ಲಿ ಜಾತ್ರಾ ಸಂಭ್ರಮ, ಮಹಾತ್ಮರು ಮೆಟ್ಟಿದ ಧರೆ ಪಾವನ: ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಜಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಂತರು, ಮಹಾತ್ಮರು ಲೋಕೋಧ್ಧಾರವನ್ನೇ ಉಸಿರಾಗಿಸಿಕೊಂಡು, ಮನುಕುಲದ ಒಳಿತಿಗಾಗಿ ಶ್ರಮಿಸುತ್ತಾರೆ. ಅಂತಹ ಮಹಾತ್ಮರು ಮೆಟ್ಟಿದ ನೆಲ ಪಾವನ ಎಂದು ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರ ಮಹಾಸ್ವಾಮಿಗಳು ಹೇಳಿದರು.
ನಾಲವಾರ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ತೊಟ್ಟಿಲು (ನಾಮಕರಣ) ಸಮಾರಂಭ ಹಾಗೂ ಸೇವಾಧಾರಿ ಸದ್ಭಕ್ತರಿಗೆ ಗುರುರಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕೃಷ್ಣಾ ಭೀಮಾ ನದಿ ತೀರದ ಸಗರನಾಡು ಸುರಪುರದ ತಿಮ್ಮಾಪುರದಲ್ಲಿ ಜನ್ಮವೆತ್ತಿ, ಕಾಖಂಡಕಿಯ ಗುರು ಮಲ್ಲಾರಾಧ್ಯರ ಅನುಗ್ರಹ ಪಡೆದು ನಾಲವಾರದ ನೆಲಕ್ಕೆ ಆಗಮಿಸಿ ಜೀವಂತ ಸಮಾಧಿಸ್ಥರಾಗಿ, ಗದ್ದುಗೆಯ ಜಾಗೃತ ಶಕ್ತಿಯಾಗಿ ನಾಡನ್ನು ಬೆಳಗುತ್ತಿರುವ ಕೋರಿಸಿದ್ಧೇಶ್ವರ ಶಿವಯೋಗಿಗಳು ಮನುಕುಲದ ಕಲ್ಯಾಣಕ್ಕಾಗಿಯೇ ಉದಯಿಸಿದ ಕಾರಣಿಕ ಪುರುಷರಾಗಿದ್ದಾರೆ ಎಂದು ಹೇಳಿದರು.
ಜೀವಿತಾವಧಿಯಲ್ಲಿ ಸಾವಿರಾರು ಪವಾಡಗೈದು, ಲಕ್ಷಾಂತರ ಭಕ್ತರ ಬಾಳು ಬೆಳಗಿದ ಧೀಃಶಕ್ತಿ ಕೋರಿಸಿದ್ಧೇಶ್ವರ ಶಿವಯೋಗಿಗಳು ಇಂದಿಗೂ ಬೇಡಿ ಬಂದವರ ಬವಣೆ ಕಳೆದು, ಇಷ್ಟಾರ್ಥ ಸಿದ್ಧಿಸುವ ಕಾಮಧೇನುವಾಗಿದ್ದಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನಿತ್ಯವೂ ಕಾಣಬಹುದು ಎಂದರು.
ನೇತೃತ್ವ ವಹಿಸಿದ್ದ ಮುದನೂರಿನ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತೊಟ್ಟಿಲೋತ್ಸವ ಕಾರ್ಯಕ್ರಮದ ವಿಧಿವಿಧಾನ ನೆರವೇರಿಸಿದರು.
ಪೂಜ್ಯರ ಜನ್ಮ ಷಷ್ಠ್ಯಬ್ದಿ ವರ್ಷದ ಪ್ರಯುಕ್ತ 60 ಜನ ಶ್ರೀಮಠದ ಸದ್ಭಕ್ತ ದಂಪತಿಗಳಿಗೆ ವಿಶೇಷವಾಗಿ ಸತ್ಕರಿಸಿ ಗುರುರಕ್ಷೆ ನೀಡಲಾಯಿತು. ನಾಗಯ್ಯ ಶಾಸ್ತ್ರಿಗಳು ವಡಿಗೇರಾ ಅವರು ಪುರಾಣ ಪ್ರವಚನ ನಡೆಸಿಕೊಟ್ಟರು.
ಮಲ್ಲಣ್ಣಗೌಡ ಪೋಲಿಸ್ ಪಾಟೀಲ ನಾಲವಾರ, ಮಹಾದೇವ ಗಂವ್ಹಾರ, ಡಾ.ಪ್ರಕಾಶ ಹಿರೇಮಠ ಗಂವ್ಹಾರ, ಡಾ.ಸಿದ್ಧರಾಜರೆಡ್ಡಿ ಯಾದಗಿರಿ, ರಾಜಶೇಖರ ಮುತ್ತಿಗೆ ಕಲಬುರ್ಗಿ, ಬಸವರಾಜ ಪಾಟೀಲ್ ಬಿರಾಳ, ಅನುಪ್ ಪಾಟೀಲ್ ಸಂಕನೂರ, ಶ್ರೀಕಾಂತ ಗೌಡ ಮಡ್ನಾಳ್ ಇಬ್ರಾಹಿಂಪುರ್, ಶರಣ ಕುಮಾರ ಜಾಲಹಳ್ಳಿ, ಶಾಂತಕುಮಾರ್ ಜೆರಟಿಗಿ, ಚಂದ್ರಶೇಖರ್ ಗೋಗಿ, ಸಿದ್ದಯ್ಯ ಸ್ವಾಮಿ ಪಡೆದಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.