Oplus_0

ನಾಲವಾರ ಜಾತ್ರೆ-2025 ಕ್ಕೆ ಚಾಲನೆ, ಮನುಕುಲದ ಒಳಿತಿಗೆ ಶ್ರಮಿಸುತ್ತಿರುವ ನಾಲವಾರ ಮಠ: ತೇಜಸ್ವಿನಿ ಅನಂತಕುಮಾರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜಾತಿ, ಮತ, ಪಂಥಗಳ ಅಡ್ಡಗೋಡೆಗಳನ್ನು ತೊಡೆದುಹಾಕಿ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ನಾಲವಾರ ಮಠದ ಕಾರ್ಯ ಶ್ಲಾಘನೀಯ ಎಂದು ಅದಮ್ಯ ಚೇತನ ಸಂಸ್ಥಾಪಕಿ, ಸಮಾಜ ಸೇವಕಿ, ತೇಜಸ್ವಿನಿ ಅನಂತಕುಮಾರ ಹೇಳಿದರು.

ಅವರಾತ್ರಿ ಅಮಾವಾಸ್ಯೆಯ ದಿನದಂದು ನಾಲವಾರ ಜಾತ್ರೆ-2025 ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಲವಾರ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಾಗಿರದೇ,ಕಲ್ಯಾಣ ನಾಡಿನ ಸಾಂಸ್ಕೃತಿಕ ಯಾತ್ರೆಯಾಗಿ ಆಚರಣೆಗೊಳ್ಳುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಬಣ್ಣಿಸಿದರು.

ನಾಲವಾರದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಕೇವಲ ಮಠಾಧೀಶರಲ್ಲ. ಅವರಲ್ಲೊಬ್ಬ ಸಾಹಿತಿ, ಸಮಾಜ ಸೇವಕ, ದಾರ್ಶನಿಕರಿದ್ದು, ಜನಸಾಮಾನ್ಯರಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ದಿ.ಅನಂತಕುಮಾರ ಅವರು ನಾಲವಾರ ಶ್ರೀಮಠ ಹಾಗೂ ಪೂಜ್ಯರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಹಲವು ಬಾರಿ ಪೂಜ್ಯರ ಆಶೀರ್ವಾದ ಪಡೆದಿದ್ದನ್ನು ಅವರು ನೆನಪಿಸುತ್ತಿದ್ದರು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳು ಜನಮನದ ಉದ್ಧಾರಕ್ಕಾಗಿ ಹಲವಾರು ಪವಾಡಗಳನ್ನು ಗೈದು, ಜೀವಂತ ಸಮಾಧಿಸ್ಥರಾಗಿ ಇಂದಿಗೂ ಬೇಡಿ ಬರುವ ಭಕ್ತರ ಬವಣೆಗಳನ್ನು ಕಳೆಯುತ್ತಿದ್ದಾರೆ ಎಂದು ಹೇಳಿದರು.

ನಾಲವಾರ ಜಾತ್ರೆ ಕೇವಲ ಬೆಂಡು ಬತ್ತಾಸು ತಿಂದು ಹೋಗುವ ಆಡೊಂಬಲವಾಗದೇ ನಮ್ಮ ಕಲ್ಯಾಣ ನಾಡಿನ ಜಾನಪದ, ಸಾಂಸ್ಕೃತಿಕ ಸೌರಭ ಸೂಸುವ ಮಹಾಯಾತ್ರೆಯಾಗಬೇಕು ಎಂಬ ಉದ್ದೇಶದಿಂದ ಜಾತ್ರಾ ಮಹೋತ್ಸವಕ್ಕೆ ಹೊಸ ರೂಪ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಬಿಜೆಪಿ ಮುಖಂಡ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಅವರು ಮಾತನಾಡಿ, ಕೋರಿಸಿದ್ಧೇಶ್ವರ ಶಿವಯೋಗಿಗಳು ಹಲವರ ಕಷ್ಟಗಳನ್ನು ಕಳೆದು, ಅವರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ನಾಡಿಗೆ ಬೆಳಕಾಗಿದ್ದಾರೆ ಎಂದರು.

ಇನ್ನೋರ್ವ ಮುಖಂಡ ಡಾ.ಸುರೇಶ್ ಸಜ್ಜನ್ ಮಾತನಾಡಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ, ವೀಣಾ ಹಿರೇಮಠ ಶಿಕಾರಿಪುರ, ಆನಂದ ಮದರಿ ಬೆಂಗಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!