ಕೋರಿಸಿದ್ದೇಶ್ವರ ಮಠಕ್ಕೆ ಸಿದ್ದಗಂಗಾ ಶ್ರೀ ಭೇಟಿ, ನಾಲವಾರ ಶ್ರೀಗಳಿಂದ ಶರಣತತ್ವ ಪ್ರಸಾರ: ಸಿದ್ಧಲಿಂಗ ಮಹಾಸ್ವಾಮಿಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಗುರು-ವಿರಕ್ತ ಪರಂಪರೆಯ ಸಮನ್ವಯತೆಯ ಕೇಂದ್ರವಾಗಿದ್ದು, ಶರಣತತ್ವ ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ ಎಂದು ತುಮಕೂರು ಸಿದ್ಡಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಕಲಬುರಗಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಕೈಲಾಸ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಳೆದ ನಾಲ್ಕು ದಶಕಗಳಿಂದ ನಾಲವಾರ ಮಠದ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಡುತ್ತಿರುವ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳನ್ನು ನಾವು ನಿರಂತರವಾಗಿ ಗಮನಿಸುತ್ತಾ ಬಂದಿದ್ದೇವೆ ಎಂದರು.
ನಮ್ಮ ಹಿರಿಯ ಗುರುಗಳಾದ ಶತಾಯುಷಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳು ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆ ಪ್ರೀತಿಯ ಕಾರಣದಿಂದಲೇ ಇಳಿವಯಸ್ಸಿನಲ್ಲೂ ನಾಲವಾರ ಮಠದ ಕಾರ್ಯಕ್ರಮಕ್ಕೆ ಕರೆದಾಗಲೆಲ್ಲ ಆಗಮಿಸುತ್ತಿದ್ದರು ಎಂದರು.
ಗ್ರಾಮೀಣ ಪ್ರದೇಶದ ಮಠವೊಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ನಾಲವಾರ ಶ್ರೀಮಠ ಮಾದರಿಯಾಗಿದ್ದು, ಪೂಜ್ಯರ ಮಾತೃಹೃದಯ ನಮ್ಮನ್ನು ಮತ್ತೆ ಮತ್ತೆ ನಾಲವಾರ ಮಠಕ್ಕೆ ಕರೆತರುತ್ತದೆ ಎಂದರು. ನಾಲವಾರ ಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿ ಸಂಭ್ರಮಿಸುವುದನ್ನು ನಾವು ದೂರದಿಂದಲೇ ಗಮನಿಸಿದ್ದು, ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಜನಸಮುದಾಯದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುತ್ತಿದ್ದಾರೆ ಎಂದು ಹೇಳಿದರು.
ಸಾನಿಧ್ಯ ವಹಿಸಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹಿರಿಯ ಶ್ರೀಗಳಾದ ಲಿಂ.ಡಾ.ಶಿವಕುಮಾರ ಮಹಾಸ್ವಾಮಿಗಳ ಕಾಲದಿಂದಲೂ ನಾಲವಾರ ಹಾಗೂ ಸಿದ್ಧಗಂಗೆಯ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಈಗಿನ ಪೂಜ್ಯರೂ ಸಹ ಅದೇ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲವಾರ ಮಠದ ಮೂಲಕ ಜನಕಲ್ಯಾಣ ಕಾರ್ಯಮಾಡಲು ನಮಗೆ ಸಿದ್ಧಗಂಗೆಯ ಹಿರಿಯ ಶ್ರೀಗಳು ಪ್ರೇರಣೆಯಾಗಿ ನಿಂತಿದ್ದರು ಎಂದರು.
ಈ ಸಮಾರಂಭದಲ್ಲಿ ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ವೀರಣ್ಣಗೌಡ ಪರಸರೆಡ್ಡಿ, ಮಲ್ಲನಗೌಡ ಪೊಲೀಸ್ ಪಾಟೀಲ್, ಶರಣಪ್ಪಗೌಡ ತಿಪ್ಪಾರೆಡ್ಡಿ, ಯೋಗಾನಂದ ಮಳಿಮಠ, ಮಹೇಶ್ ವಿ. ಸ್ವಾಮಿ ವಿರೂಪಾಕ್ಷಯ್ಯ ಸ್ವಾಮಿ, ಈರಣ್ಣ ಇಂಗಳಗಿ, ಮಹಾದೇವ ಗಂವಾರ ಸೇರಿದಂತೆ ಉಪಸ್ಥಿತರಿದ್ದರು