ನಾಲವಾರ ಶ್ರೀಮಠದ ಜನಕಲ್ಯಾಣ ಸೇವೆ ಅನನ್ಯ :ಡಾ.ಅಜಯಸಿಂಗ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠ ಮಾಡುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಅನನ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಇತ್ತೀಚೆಗೆ 60 ನೇ ಜನ್ಮದಿನವನ್ನು ಆಚರಿಸಿಕೊಂಡ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಷಷ್ಠ್ಯಬ್ದಿ ಸಂಭ್ರಮದ ಶುಭಕೋರಿ ಅವರು ಮಾತನಾಡಿದರು.
ನಾಲವಾರ ಶ್ರೀಮಠದ ಬಗ್ಗೆ ಅಪಾರ ಅಭಿಮಾನವುಳ್ಳ ನಮ್ಮ ತಂದೆ ದಿ.ಧರ್ಮಸಿಂಗ್ ಅವರು ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನಕಕಲ್ಯಾಣ ಕಾರ್ಯಗಳಿಂದ ಮಾರು ಹೋಗಿ ಕರ್ನಾಟಕ ಸರಕಾರದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು ಎಂದರು.
ನಿರಂತರ ಜನಕಲ್ಯಾಣ ಕಾರ್ಯಗಳ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾರ್ಗದರ್ಶನ ಮಾಡುತ್ತಿರುವ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಷಷ್ಠ್ಯಬ್ದಿ ಸಮಾರಂಭವನ್ನು ಬರುವ ದಿನಗಳಲ್ಲಿ ಅತ್ಯಂತ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡಲು ಯೋಜಿಸಲಾಗಿದ್ದು, ತನು-ಮನ-ಧನದಿಂದ ಶ್ರಮಿಸಲು ಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಕರ್ತೃಶ್ರೀ ಕೋರಿ ಸಿದ್ದೇಶ್ವರ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಲಿಂಗೈಕ್ಯ ಪವಾಡಪುರುಷ ಶ್ರೀ ತೋಟೆಂದ್ರ ಶಿವಯೋಗಿಗಳವರ ಗದ್ದುಗೆ ದರ್ಶನಾಶೀರ್ವಾದ ಪಡೆದುಕೊಂಡರು
ಕ್ಯಾಪ್ಟನ್ ಯೋಗಾನಂದ ಮಳೆಮಠ, ಮಹೇಶ ವಿ.ಸ್ವಾಮಿ ಚಿಂಚೋಳಿ, ಮಹಾದೇವ ಗಂವ್ಹಾರ, ವಿರುಪಾಕ್ಷಯ್ಯ ಸ್ವಾಮಿ ಶಿವರೆಡ್ಡಿ ಗೌಡ ಕುಲಕುಂದಿ, ವೀರೇಶ್ ಮೂಲೆಗೆ, ವಿನೋದ್ ಜಾಧವ್ ಸೇರಿದಂತೆ ಹಲವರು ಇದ್ದರು.