ನೆಟ್ಟಿರೋಗದಿಂದ ಹಾಳಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ನೆಟ್ಟಿರೋಗದಿಂದ ಹಾಳಾದ ತೊಗರಿ ಬೆಳೆಗೆ ಪರಿಹಾರ ನೀಡಬೇಕು ಎಂದು ಕಲಬುರಗಿ ಜಿಲ್ಲಾ ತೊಗರಿ ಬೆಳೆಗಾರರ ಸಂಘ ಕಲಬುರ್ಗಿ ಹಾಗೂ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸೇವಾ ಸಂಘದ ನೇತೃತ್ವದಲ್ಲಿ ರೈತ ಮುಖಂಡರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಡಿಸಿಸಿ ಮಾಜಿ ಉಪಾಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ತೊಗರಿ ಕಣಜವೆಂದೇ ಹೆಸರು ವಾಸಿಯಾಗಿರುವ ಕಲಬುರಗಿ ಜಿಲ್ಲೆಯು ತೊಗರಿ ಬೆಳೆ ರೈತರು ಕಣ್ಣೀರು ಹರಿಸುವಂತಾಗಿದೆ. ಪ್ರತಿ ವರ್ಷ ಪ್ರಕೃತಿ ವಿಕೋಪ ಹಾಗೂ ಕಳಪೆ ಬೀಜ ವಿತರಣೆಯಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅದರ ಜೊತೆಗೆ ಸರಕಾರ ತೊಗರಿ ಬೋರ್ಡ ರಚನೆ ಮಾಡಿ ಹೆಸರಿಗೆ ಮಾತ್ರ ಬೋರ್ಡ ಹಾಕಿರುವುದರಿಂದ ರೈತರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ ಮತ್ತು ತೊಗರಿ ಬಗ್ಗೆ ಹೊಸದಾಗಿ ಸಂಶೋಧನೆ, ಹೊಸ ಪ್ರಯೋಗ ಮತ್ತು ತೊಗರಿ ಬೆಳೆ ಅಭಿವೃದ್ಧಿ ಪಡಿಸಿ ಅದನ್ನ ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಹಾಗೂ ರೈತರ ಸಂಕಷ್ಟದ ಸಮಯದಲ್ಲಿ ತೊಗರಿ ಬೋರ್ಡನಿಂದ ಯಾವುದೇ ತರಹದ ಸಹಕಾರ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ 6.10 ಲಕ್ಷ ಹೆಕ್ಟರ್ ಭೂಮಿಯಲ್ಲಿ ತೊಗರೆ ಬೆಳೆ ಬಿತ್ತಲಾಗಿದೆ. ಅದರಲ್ಲಿ 2.30 ಲಕ್ಷ ಹೆಕ್ಟರ್ ತೊಗರಿ ಬೆಳೆಯು ನೆಲೆ ರೋಗ ಮತ್ತು ಮಚ್ಚೆ ರೋಗದಿಂದ ಹಾನಿಯಾಗಿದೆ. ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಬೆಳೆಯಾಗಿ ಒಣಗುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಹೂ ಬಿಡುವ ಹಾಗೂ ಕಾಳು ಕಟ್ಟುವ ಸಮಯದಲ್ಲಿ ಉದುರು ಬೀಳುತ್ತಿದೆ. ಕೆಲವು ಕಡೆ ಖಾಸಗಿ ಕಂಪನಿಗಳು ಮತ್ತು ಕೃಷಿ ಇಲಾಖೆಯು ನೀಡಿರುವ ಬೀಜಗಳು ಕಳಪೆಯಾಗಿರುವುದರಿಂದ ತೊಗರಿ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಪ್ರತಿ ಎಕ್ಕರಿಗೆ ಕನಿಷ್ಠ 10 ರಿಂದ 15 ಸಾವಿರ ಹಣವನ್ನು ಖರ್ಚು ಮಾಡಿ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಪ್ರಕೃತಿ ಕಷ್ಟ ಕೊಟ್ಟರೆ ಇನ್ನೊಂದೆಡೆ ಕಂಪನಿಗಳು ಮತ್ತು ಅಧಿಕಾರಿಗಳು ರೈತರ ರಕ್ತ ಹೀರುತ್ತಿದ್ದಾರೆ. ಇಡೀ ದೇಶಕ್ಕೆ ತೊಗರಿ ನೀಡುವ ರೈತರು ಭಾರಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ತೊಗರಿ ಬೆಳೆಯುವ ರೈತರಿಗೆ ಸರಕಾರವು ಪರಿಹಾರವನ್ನು ನೀಡಿ ರೈತರಿಗೆ ಕೈ ಹಿಡಿಯಲ್ಲಿಕ್ಕೆ ಮುಂದೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ ಮಾತನಾಡಿ, ತೊಗರಿ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ. 25,000 ರಂತೆ ಪರಿಹಾರ ನೀಡಬೇಕು, ತೊಗರಿ ಬೋರ್ಡಿಗೆ ಪ್ರತಿ ವರ್ಷಕ್ಕೆ 200 ಕೋಟಿ ರೂಪಾಯಿ ಅನುದಾನ ನೀಡಿ ರೈತರ ಹಿತ ಕಾಪಾಡಬೇಕು, ವೈಜ್ಞಾನಿಕವಾಗಿ ಡೋನ್ ಕ್ಯಾಮೆರಾ ಮತ್ತು ಇತರೆ ಆಧುನಿಕ ತಂತ್ರಜ್ಞಾನದ ಮುಖಾಂತರ ಸರ್ವೇ ಮಾಡಿ ನಿಜವಾದ ರೈತರಿಗೆ ಪರಿಹಾರ ನೀಡಬೇಕು, ವಿಮಾ ಕಂಪನಿಗಳಿಗೆ ರೈತರು ಕಟ್ಟುವ ಕಂತಿನ ಹಣದಲ್ಲಿ ಸರಕಾರ ಶೇ.50 ರಷ್ಟು ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವುಕುಮಾರ ಯಾಗಾಪೂರ, ಚಂದು ಜಾಧವ, ಸುನೀಲ್ ಮಾನ್ಪಡೆ, ರಮೇಶ್ ಕಂಠಿ, ಹೀರಾಸಿಂಗ್ ರಾಠೋಡ, ಶಾಂತಪ್ಪ ಪಾಟೀಲ, ಸೋಮಶೇಖರ ಸಿಂಗೆ, ಶರಣು ಜಿಡಗಿ, ಭೀಮರಾಯ, ವಿಜಯಕುಮಾರ್ ಪೂಜಾರಿ, ಸಂಜು ವಾಲೀಕಾರ, ಮಲ್ಲಿಕಾರ್ಜುನ ಡಾಂಗೆ, ಭೀಮನು ವಾಲೀಕಾರ, ದೇವರಾಜ್ ರಾಠೋಡ, ರಾಜು ಪವಾರ, ಭರತ್ ರಾಠೋಡ, ಅರ್ಜುನ್ ಝಾಪೂರಕರ್, ಅನೀಲ್, ವಿಜಯಕುಮಾರ್ ಸೇರಿದಂತೆ ಅನೇಕರು ಇದ್ದರು.