ಒಳ ಮೀಸಲಾತಿ ಸುಗ್ರೀವಾಜ್ಞೆ ತಕ್ಷಣವೇ ಜಾರಿಗೊಳಿಸಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಒಳ ಮೀಸಲಾತಿ ಸುಗ್ರೀವಾಜ್ಞೆ ತಕ್ಷಣವೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ ಮುಖಂಡರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶಹಾಬಾದ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ಆಶಯದಂತೆ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರಿವಿದೆ, ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳ ಮೀಸಲಾತಿ ನೀಡಿದರೆ ಸಮಾನತೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ, ಸಂವಿಧಾನದ ಆಶಯದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಸಾರವಾಗಿ ಒಳ ಮೀಸಲಾತಿ ರಾಜ್ಯ ಸರ್ಕಾರವು ಮಾಡುವುದಕ್ಕೆ ಯಾವುದೇ ತರಹದ ಕಾನೂನು ಉಲ್ಲಂಘನೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುತ್ತದೆ. ಸುಪ್ರೀಂ ಕೋರ್ಟೀನ ಈ ಐತಿಹಾಸಿಕ ನಿರ್ಣಯವನ್ನು ದಲಿತ ಮಾದಿಗ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಶಿವರಾಜ್ ಎಂ.ಕೋರೆ, ಜಿಲ್ಲಾ ಪ್ರತಿನಿಧಿ ರವಿ ಬೆಳಮಗಿ, ಶಹಾಬಾದ ಸಂಘಟನಾ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಗೋಳಾ ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಾಳಕರ್ ಅವರು ಸ್ವಾಗತಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಮೂರು ದಶಕಗಳ ಸತತವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಬೇಕು ಎಂದು ಹೋರಾಟ ಮಾಡಿದ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ನಿರ್ಣಯ ಪ್ರಕಟಿಸುವ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಸರ್ಕಾರ ತನಗಿರುವ ಬದ್ಧತೆ ಸಾಬೀತು ಪಡಿಸಬೇಕು ಮತ್ತು ಚುನಾವಣೆ ಸಂದರ್ಭದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತಕ್ಷಣ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಆಶ್ವಾಸನೆ ಕೊಟ್ಟಿತ್ತು. ಆದರೆ ಇಲ್ಲಿಯವರೆಗೆ ಆಶ್ವಾಸನೆ ಈಡೇರಿಸಿಲ್ಲ, ಹಾಗಾಗಿ ತಕ್ಷಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಹಲವಾರು ಇಲಾಖೆಯ ನೇಮಕಾತಿ ಹುದ್ದೆಗಳನ್ನು ತಕ್ಷಣವೇ ತಡೆಹಿಡಿಯಬೇಕು, ಒಂದು ವೇಳೆ ಒಳ ಮೀಸಲಾತಿ ಸುಗ್ರೀವಾಜ್ಞೆ ವಿಳಂಬವಾದಲ್ಲಿ ರಾಜ್ಯಾದ್ಯಂತ ದಲಿತ ಮಾದಿಗ ಸಮನ್ವಯ ಸಮಿತಿ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.