ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: ವೀರಶೈವ ಲಿಂಗಾಯತ ಸಮಾಜ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಸ್ವರೂಪದ ಕುರಿತು ಈ ಮುಂಚೆಯೇ ಸರ್ಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದ ಸರ್ಕಾರ ದುರುದ್ದೇಶಪೂರ್ವಕವಾಗಿ ಚಳುವಳಿಯನ್ನು ಹತ್ತಿಕ್ಕುವ ದುರಾಲೋಚನೆಯಿಂದ ಚಳವಳಿ ನಿರತ ಅಮಾಯಕರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿರುವುದಕ್ಕೆ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ತಾಲೂಕು ಅಧ್ಯಕ್ಷ ಅಣ್ಣಾರಾಯ ಇವಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದಲೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟದ ಕುರಿತು ಮಾಹಿತಿಗಳನ್ನು ಒದಗಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಪೂಜ್ಯರೊಂದಿಗೆ ಸಕಾರಾತ್ಮಕ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವ ಮಾರ್ಗೋಪಾಯಗಳನ್ನು ಕಂಡುಹಿಡಿಯದೇ ಚಳವಳಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ತನ್ನ ಅಸಮರ್ಥ ನಡೆ ತೋರಿಸಿದೆ ಎಂದು ಹೇಳಿದರು.
ಕೂಡಲೇ ಸರ್ಕಾರ ಈ ಸಂಬಂಧವಾಗಿ ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲೆ ಹಲ್ಲೆ ಆಗಿರುವ ಕುರಿತು ಕ್ಷಮೆಯಾಚಿಸಲಿ, ಮಾರಣಾಂತಿಕ ಪೆಟ್ಟು ತಿಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.