ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಮಾದಿಗ ಎಂದು ಬರೆಯಿಸಿ: ಲಿಂಗಪ್ಪ ಹತ್ತಿಮನಿ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪರಿಶಿಷ್ಟ ಜಾತಿಗಳ ಸಮೀಕ್ಷೆ ಸಂದರ್ಭದಲ್ಲಿ ನಮ್ಮ ಮೂಲ ಜಾತಿ ಮಾದಿಗ ಇರುತ್ತದೆ. ಆದ್ದರಿಂದ ನಾವು ನಮ್ಮ ಜಾತಿಯ ಸಂಖ್ಯೆ – 61 ರಂತೆ ಮಾದಿಗ ಎಂದು ಬರೆಸಬೇಕು ಯಾದಗಿರಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಯ ಎಲ್ಲ ಉಪಜಾತಿಗಳ ನಿಖರವಾದ ಅಂಕಿ -ಸಂಖ್ಯೆಗಳನ್ನು ಸಂಗ್ರಹಿಸಿ ಒಳಮೀಸಲಾತಿ ಜಾರಿ ಮಾಡಲು ಪರಿಶಿಷ್ಟ ಜಾತಿ ಉಪಜಾತಿಗಳ ಸಮೀಕ್ಷೆ ಕಾರ್ಯ ಮೇ.5 ರಿಂದ ಶುರುವಾಗಲಿದೆ ಆದ್ದರಿಂದ ಪ್ರತಿಯೊಬ್ಬರು ತಪ್ಪದೇ ಭಾಗವಹಿಸಬೇಕು ಎಂದು ಹೇಳಿದರು.
ವಿಶೇಷವಾಗಿ ಒಳಮೀಸಲಾತಿಗಾಗಿ ಧ್ವನಿ ಎತ್ತಿರುವ ನಮ್ಮ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಸಿಗಲು ಈ ಕೆಳಕಂಡ ದಿನಾಂಕಗಳಂದು ಪರಿಶಿಷ್ಟ ಜಾತಿಯ ಉಪಜಾತಿಯ ಕುಟುಂಬಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಈ ಕೆಳಕಂಡ ಹಂತಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
1 ನೇ ಹಂತ: ಮೇ.5 ರಿಂದ ಮೇ.17 ರ ವರೆಗೆ ಸಮೀಕ್ಷೆ ಅಧಿಕಾರಿಗಳು ಪ್ರತಿಯೊಂದು ಮನೆ ಮನೆಗೂ ಭೇಟಿ ನೀಡಿ ಕುಟುಂಬ ಸದಸ್ಯರುಗಳ ವಿವರ ಪಡೆಯುತ್ತಾರೆ. 2 ನೇ ಹಂತ: ಮೇ.19 ರಿಂದ ಮೇ.21 ರವರೆಗೆ ಸಮೀಕ್ಷೆಯಿಂದ ಬಿಟ್ಟು ಹೋದ ಅಥವಾ ಹೊರಗುಳಿದ ಮನೆಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ತಾಲೂಕು ಕಚೇರಿಗಳಲ್ಲಿ ದಾಖಲಾತಿಗಳನ್ನು ಸಲ್ಲಿಸಿ ಸಮೀಕ್ಷೆಯ ವಿವರ ನೀಡುವುದು. 3 ನೇ ಹಂತ: ಮೇ.21 ರಿಂದ ಮೇ.23 ರ ವರೆಗೆ ಮೊಬೈಲ್ ಮುಖಾಂತರ ಸಮೀಕ್ಷೆಯ ವಿವರವನ್ನು ಸ್ವಯಂ ಘೋಷಣೆ ಮೂಲಕ ನೀಡಬೇಕು.
ಒಂದು ವೇಳೆ ಸಮೀಕ್ಷೆಯಿಂದ ದೂರ ಉಳಿದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳಾದ ಸರ್ಕಾರಿ ಮನೆ, ಗಂಗಾ ಕಲ್ಯಾಣ, ಸಬ್ಸಿಡಿ ಲೋನ್’ಗಳು, ಸರ್ಕಾರಿ ನೌಕರಿ, ಇಂಜಿನಿಯರಿಂಗ್ ಸೀಟುಗಳು, ಹಾಸ್ಟೆಲ್ ಸೌಲಭ್ಯ, ಎಂಬಿಬಿಎಸ್ ಸೀಟುಗಳು, ಉಚಿತ ಶಿಕ್ಷಣ ಮತ್ತು ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಕಟ್ ಆಗುತ್ತದೆ ಎಂದ ಹೇಳಿದರು.
ಒಂದು ಮನೆಯನ್ನು ಬಿಡದೆ ಸಮೀಕ್ಷೆ ಮಾಡಿಸಿ ಹಾಗೂ ದುಡಿಮೆಗಾಗಿ ಬೆಂಗಳೂರು ಬಾಂಬೆ ಪೂನಾ ಹಾಗೂ ಹಳ್ಳಿಯಿಂದ ಸಿಟಿಗೆ ಹೋದವರನ್ನು ಮೊಬೈಲ್ ಮುಖಾಂತರ ಸಂಪರ್ಕಿಸಿ ಕರೆತಂದು ಸದರಿ ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು ತುಂಬಲು ಮನವಿ ಮಾಡಿದ್ದಾರೆ.
ನ್ಯಾಯವಾದಿ ಗೋಪಾಲ್ ದಾಸನಕೇರ ಮಾತನಾಡಿ, ಸಮೀಕ್ಷೆಗಾಗಿ ಜಾತಿ ಪ್ರಮಾಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಟಿಸಿ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತದೆ ಮತ್ತು ಈ ಮಾಹಿತಿಯ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಮೂಲಕ ಸಮೀಕ್ಷೆಯ ಜಾಗೃತಿ ಮೂಡಿಸಿ ಹಾಗೂ ವ್ಯಾಪಕವಾಗಿ ಪ್ರಚಾರ ಮಾಡಿ. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್’ಬುಕ್, ಇನ್ಸ್ಟಾಗ್ರಾಮ್ ಮತ್ತು ಕರಪತ್ರಗಳ ಮೂಲಕ ಹೆಚ್ಚು ಹೆಚ್ಚು ಪ್ರಚಾರ ಮಾಡಿ ಸಮುದಾಯದ ಪ್ರತಿಯೊಬ್ಬರೂ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಇದು ನಮ್ಮ ಮಾದಿಗ ಸಮುದಾಯದ ಪ್ರತಿಯೊಬ್ಬರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.
ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಸಮುದಾಯವನ್ನು ನಾವು ಉಳಿಸೋಣ, ಬೆಳೆಸೋಣ ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜ ಮುಖಂಡರಾದ ಶಾಂತರಾಜ್ ಮೋಟ್ನಳ್ಳಿ, ಮಲ್ಲಣ್ಣ ದಾಸನಕೇರ, ನಿಂಗಪ್ಪ ವಡ್ನಳ್ಳಿ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರ, ಯಲ್ಲಪ್ಪ ಮಾಳಿಕೇರಿ, ಹನುಮಂತ ಲಿಂಗೇರಿ, ಎಂ.ಕೆ ಬಿರನೂರ, ಮಲ್ಲು ಹಲಗಿ ಕುರಕುಂದ, ಮಾರುತಿ ಫಸಫೂಲ್ ಸೇರಿದಂತೆ ಇತರರು ಇದ್ದರು.