ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ
ಕಲ್ಯಾಣ ಕರ್ನಾಟಕ ಪ್ರದೇಶ ಮುಂದೆ ಬರಲು ಶೈಕ್ಷಣಿಕವಾಗಿ ಅಭಿವೃದ್ಧಿ ಆಗುವುದು ಅವಶ್ಯಕ: ಅಜಯಸಿಂಗ್
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಲ್ಲಿ ಮುಂದೆ ಬರಬೇಕೆಂದರೇ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿ ಆಗುವುದು ಅತಿ ಅವಶ್ಯಕವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ನಗರದ ಪತ್ರಕರ್ತರ ಸಾಂಸ್ಕೃತಿಕ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರ್ಗಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ಮಂಡಳಿಯು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ 652 ಕೋಟಿ ರೂ. ಹಣದಲ್ಲಿ ಫಲಿತಾಂಶ ಸುಧಾರಣೆಗಾಗಿ ಕೇವಲ 3 ಕೋಟಿ ರೂ.ಖರ್ಚು ಮಾಡಿದೆ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ 41 ಕ್ಷೇತ್ರಗಳಲ್ಲಿ ಶಿಕ್ಷಣಕ್ಕಾಗಿ ಶೇ.25 ಹಣ ಖರ್ಚು ಮಾಡಬೇಕು ಎಂದು ಎಲ್ಲ ಶಾಸಕರಿಗೆ ತಿಳಿಸಲಾಗಿದೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕೆಕೆಆರ್ ಡಿಬಿ ವತಿಯಿಂದ ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ ನೇತೃತ್ವದಲ್ಲಿ ಒಂದು ಎಕ್ಸಪರ್ಟ್ ಕಮಿಟಿ ಮಾಡಲಾಗಿದೆ ಎಂದರು.
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಭಾಗದ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಅಕಾಡೆಮಿ ವತಿಯಿಂದ ಹೊಸ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳು ಜಾರಿ ಮಾಡುವ ಕನಸು ಇಟ್ಟುಕೊಂಡಿದ್ದೇನೆ, ಪ್ರಮುಖವಾಗಿ ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮ ಮತ್ತು ಯುವ ಪತ್ರಕರ್ತರಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಮಾನವ ಕಂಪ್ಯೂಟರ್ ಬೆಂಗಳೂರಿನ ಸಿದ್ದು ಲೌಟೆ ಮಾತನಾಡಿದರು.
ವಾರ್ತೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಿದ್ದೇಶ್ವರಪ್ಪ, ಜಿಲ್ಲಾ ಸಂಪಾದಕರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಲಿ ಬಿರಾದಾರ, ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ಹಿರಿಯ ಪತ್ರಕರ್ತರಾದ ಜಯತೀರ್ಥ ಪಾಟೀಲ, ಹಣಮಂತ್ರಾಯ ಬೈರಾಮಡಗಿ, ದೇವಿಂದ್ರಪ್ಪ ಕಪನೂರ, ಸುಭಾಷ್ ಬಣಗಾರ್, ರಾಮಕೃಷ್ಣ ಬಡಶೇಶಿ, ಮಹಿಪಾಲರೆಡ್ಡಿ ಮುನ್ನೂರು, ಬಿ.ವಿ.ಚಕ್ರವರ್ತಿ, ಬಸವರಾಜ ಚಿನಿವಾರ್, ಚಂದ್ರಶೇಖರ ಕವಲಗಾ, ಮಹೇಶ್ ಸೇರಿದಂತೆ ಇತರರು ಇದ್ದರು. ಬಾಬುರಾವ್ ಕೋಬಾಳ್ ಪ್ರಾರ್ಥಿಸಿದರು, ದೇವಿಂದ್ರಪ್ಪ ಅವಂಟಿ ಸ್ವಾಗತಿಸಿದರು, ಸುರೇಶ್ ಬಡಿಗೇರ್ ನಿರೂಪಿಸಿದರು.
“ಕಲಬುರ್ಗಿ ಜಿಲ್ಲಾ ಪತ್ರಿಕಾ ಭವನದ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ ಯಲ್ಲಿ ಅವಕಾಶ ಇದ್ದರೆ 1 ಕೋಟಿ ಅಥವಾ ಮುಖ್ಯಮಂತ್ರಿಗಳ ನಿಧಿಯಿಂದ 50 ಲಕ್ಷ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ”-ಡಾ.ಅಜಯ್ ಸಿಂಗ್ ಅಧ್ಯಕ್ಷರು ಕೆ.ಕೆ.ಆರ್.ಡಿ.ಬಿ ಕಲಬುರ್ಗಿ.