Oplus_131072

ಛಲವಾದಿ ನಾರಾಯಣಸ್ವಾಮಿ ಅವರನ್ನು ಐಬಿಯಲ್ಲಿ ಯಾರೂ ಕೂಡಿ ಹಾಕಿಲ್ಲ, ಸೂಕ್ತ ರಕ್ಷಣೆ ನೀಡಿದ ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ: ನಾಗರೆಡ್ಡಿ ಪಾಟೀಲ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪೊಲೀಸರು ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿ ಕೆಲಸ ಮಾಡಿಲ್ಲ ಅವರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ಮಾಡಿದ್ದಾರೆ ಹೀಗಾಗಿ ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷಮೆ ಕೋರಬೇಕು ಎಂದು ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಅಂಬಾರಾಯ ಅಷ್ಠಗಿ ಬಂದು ಹೋರಾಟದ ಕಿಚ್ಚು ಆರಿಸುವ ಬದಲು ನಾಲಾಯಕ್ ಪ್ರಿಯಾಂಕ್ ಎಂದು ಹೇಳಿ ಮತ್ತಷ್ಟು ಬೆಂಕಿ ಹಚ್ಚುವ ಕೆಲಸ ಮಾಡಿದ್ದರಿಂದ ಪ್ರಿಯಾಂಕ್ ಖರ್ಗೆ ಅಭಿಮಾನಿಗಳಿಗೆ ಸಹಜವಾಗಿ ಸಿಟ್ಟು ಬಂದಾಗ ನೂಕಾಟ ತಳ್ಳಾಟ ಆಗಿದೆ. ಪೊಲೀಸರು ಒಂದು ವೇಳೆ ಇರದೆ ಹೋದರೆ ಛಲವಾದಿ ನಾರಾಯಣಸ್ವಾಮಿ ಹಾಗೂ ಅಂಬಾರಾಯ ಅಷ್ಠಗಿ ಸುರಕ್ಷಿತವಾಗಿ ಇಲ್ಲಿಂದ ಹೋಗುತ್ತಿರಲಿಲ್ಲ ಇದನ್ನು ಬಿಜೆಪಿ ಮುಖಂಡರು ಅರಿತುಕೊಳ್ಳಬೇಕು. ಮತ್ತೇ ಇಷ್ಟೇಲ್ಲಾ ಸಮಸ್ಯೆ ಆದರೂ ಬಿಜೆಪಿ ಮುಖಂಡರು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುತ್ತಿದ್ದಾರೆ ಅವರು ರಾಜೀನಾಮೆ ಕೊಡುವಂತ ಯಾವುದೇ ತಪ್ಪು ಮಾಡಿಲ್ಲ, ಪ್ರಿಯಾಂಕ್ ಖರ್ಗೆ ಅವರಿಗೆ ನಾಯಿ ಅಂತ ಹೇಳಿ ಅವಮಾನ ಮಾಡಿದ ಛಲವಾದಿ ನಾರಾಯಣಸ್ವಾಮಿ ಅವರೇ ತಮ್ಮ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ತಿರಂಗಾ ಯಾತ್ರೆ ರಾಷ್ಟ್ರೀಯ ಕಾರ್ಯಕ್ರಮ ಇದಕ್ಕೆ ಯಾರು ಅಡ್ಡಿಪಡಿಸಿಲ್ಲ, ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಚಿತ್ತಾಪುರಕ್ಕೆ ಬಂದಾಗ ಸಹಜವಾಗಿ ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ಸಚಿವರ ಕ್ಷಮೆ ಕೋರುವಂತೆ ಪ್ರತಿಭಟಿಸಿದ್ದಾರೆ, ಪ್ರತಿಭಟನೆಗೆ ಹಾಗೂ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಮೂಲ ಕಾರಣ ಯಾರು ಎಂಬುದನ್ನು ಬಿಜೆಪಿಯವರೇ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕುಟುಕಿದರು.

ಛಲವಾದಿ ನಾರಾಯಣಸ್ವಾಮಿ ಅವರನ್ನು ಪ್ರವಾಸಿ ಮಂದಿರದಲ್ಲಿ ಯಾರೂ ಕೂಡಿ ಹಾಕಿಲ್ಲ ಹೊರಗಡೆ ಬಂದು ಕಾರ್ಯಕರ್ತರ‌ ಮುಂದೆ ಕ್ಷಮೆ ಕೋರಿದ್ದರೆ ಇಷ್ಟೇಲ್ಲಾ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಕುಟುಂಬದವರು 40 ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ, ಇಲ್ಲಿವರೆಗೆ ಗುಂಡಾಗಿರಿ ಮಾಡಿಲ್ಲ ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮತ್ತು ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ ಅವರು ಮಾತನಾಡಿ, ಚಿತ್ತಾಪುರಿನ ಶಾಂತಿ, ಪ್ರೀತಿ ವಿಶ್ವಾಸ ಕಾಂಗ್ರೆಸ್ ನಿಂದ ಹದಗೆಟ್ಟಿಲ್ಲ ಅದು ಬಿಜೆಪಿಯಿಂದ ಹದಗೆಟ್ಟಿದೆ. ಬಿಜೆಪಿಯವರು ಹೊರಗಿನವರನ್ನು ಇಲ್ಲಿಗೆ ಕರೆತರುವ ಮೂಲಕ ಇಲ್ಲಿನ ಶಾಂತಿಯ ವಾತಾವರಣ ಹದಗೆಡಿಸಿದ್ದಾರೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಬೈದರೆ ಲೀಡರ್ ಆಗುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಆ ಭ್ರಮೆಯಿಂದ ಹೊರಬನ್ನಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಪ್ರಗತಿಪರ ಅಭಿವೃದ್ಧಿ ಪರ ಇರುವ ಪ್ರಿಯಾಂಕ್ ಖರ್ಗೆ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಬೇಡಿ. ಕಾಂಗ್ರೆಸ್ ಅನ್ನ ತಿಂದು ಬೆಳೆದವರು ಇಂದು ಕಾಂಗ್ರೆಸ್ ನಾಯಕರಿಗೆ ಬೈಯುತ್ತಿದ್ದಾರೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಕಾಂಗ್ರೆಸ್ ಮುಖಂಡರಾದ ಸೂರ್ಯಕಾಂತ ಪೂಜಾರಿ, ಓಂಕಾರ ರೇಷ್ಮಿ, ಸಿದ್ದಣ್ಣಗೌಡ ಪಾಟೀಲ, ಮಲ್ಲಿನಾಥ ಪಾಟೀಲ, ಸಂಜಯ ಬುಳಕರ್, ಶೇಖ್ ಬಬ್ಲು, ವಿನ್ನುಕುಮಾರ ಜಡಿ, ವಿಠಲ್ ಕಟ್ಟಿಮನಿ, ನಾಗೇಶ್ ಹಲಗಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!