ಪ್ರಶಸ್ತಿಗಳು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಲಿದೆ: ಸಿದ್ದಲಿಂಗ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಮ್ಮ ವೃತ್ತಿ ಜೀವನದಲ್ಲಿ ಪಡೆಯುವ ಪ್ರತಿಯೊಂದು ಪ್ರಶಸ್ತಿಗಳು ನಮ್ಮನ್ನು ನಾವು ಆತ್ಮವಲೋಕನ ಮಾಡಿಕೊಳ್ಳುವುದರೊಂದಿಗೆ ಶಿಕ್ಷಕರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಮತಕ್ಷೇತ್ರದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಸೇವಾನಿರತ ಶಿಕ್ಷಕರು ಜಿಲ್ಲಾ ಹಾಗೂ ತಾಲೂಕ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಏರ್ಪಡಿಸಿದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತಿನಲ್ಲಿರುವ ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಎನ್ನುವುದು ಅತ್ಯಂತ ಪವಿತ್ರವಾದದ್ದು. ಬದಲಾದ ಕಾಲಘಟ್ಟದಲ್ಲಿ ಶಿಕ್ಷಕರ ಪಾತ್ರವೂ ಬದಲಾಗುತ್ತಿದೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಸವಾಲು ಶಿಕ್ಷಕರಿಗಿದೆ. ಶಿಕ್ಷಕರಾದವರು ತಮ್ಮ ವೃತ್ತಿಯನ್ನು, ತಮ್ಮ ವಿಷಯವನ್ನು ಪ್ರೀತಿಸಬೇಕು. ಶಾಲೆಯಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳೆoದು ಭಾವಿಸಿ ಕಲಿಕೆ ಮಾಡಿಸಬೇಕು. ಅಂದಾಗ ಮಾತ್ರ ಶಿಕ್ಷಕರ ಶಾಶ್ವತವಾಗಿ ಮಕ್ಕಳ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಮಾತನಾಡಿ, ಇವತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮಕ್ಕಿಂತ ಹೆಚ್ಚಾಗಿ ಶಿಕ್ಷಕರು ಮಕ್ಕಳಿಗೆ ನೈತಿಕತೆಯನ್ನು ಮೂಡಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡುವ ಕೆಲಸ ಮಾಡಬೇಕಾಗಿದೆ. ನಮ್ಮ ಮಕ್ಕಳು ಸಮಾಜದಲ್ಲಿ ಪ್ರಜ್ಞಾವಂತ ಪ್ರಜೆಗಳಾಗಲು ಶಿಕ್ಷಕರ ಶ್ರಮ ಹೆಚ್ಚಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಾದ ಭೀಮಾಶಂಕರ ಬಮ್ಮನಳ್ಳಿ, ಈಶ್ವರಗೌಡ ಪಾಟೀಲ್, ಸುಭಾಷ ಚವ್ಹಾಣ ಅವರನ್ನು ಸತ್ಕರಿಸಲಾಯಿತು.
ಶಿಕ್ಷಕರಾದ ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಸಿದ್ದಲಿಂಗ ಬಾಳಿ, ಶಿವಕುಮಾರ್ ಸರಡಗಿ, ಸೋಮಶೇಖರ ಬಾಳಿ, ಶ್ಯಾಮಸುಂದರ ದೊಡ್ಡಮನಿ, ಬಾಬು ಕಣ್ಣೂರ ಉಪಸ್ಥಿತರಿದ್ದರು.