ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದುರುದ್ದೇಶದ ರಾಜಕೀಯ, ಡೆತ್ ನೋಟ್ ಸಮಗ್ರ ತನಿಖೆಗೆ ಕಾಂಗ್ರೆಸ್ ಮುಖಂಡರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ರೀತಿಯ ಸಂಬಂಧವಿರದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಎಳೆದು ತರುವ ಮೂಲಕ ಬಿಜೆಪಿ ದುರುದ್ದೇಶದ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಖರ್ಗೆ ಕುಟುಂಬಕ್ಕೆ ಕಳಂಕ ಹಚ್ಚುವ, ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಡೆತ್ ನೋಟ್ ಹೆಸರಲ್ಲಿ ದುರುದ್ದೇಶದ ರಾಜಕಾರಣಕ್ಕೆ ಪ್ರಕರಣ ಬಳಸಿಕೊಂಡು ಸಚಿವರ ಹೆಸರು ಅನಗತ್ಯವಾಗಿ ಪ್ರಸ್ತಾಪ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಕ್ಷುಲ್ಲಕ ರಾಜಕೀಯ ಬಿಜೆಪಿಯ ಜಾಯಮಾನವಾಗಿದೆ ಎಂದು ಆಪಾದಿಸಿದರು.
ಗುತ್ತಿಗೆದಾರ ಸಚಿನ್ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಏನೇ ಸಮಸ್ಯೆ ಇದ್ದರೂ ಕಾನೂನಿನ ಮೊರೆ ಹೋಗಬೇಕಿತ್ತು. ಅವರು ಸಾವಿಗೆ ಶರಣಾಗುವ ಮುಂಚೆ ಏಳು ಪುಟಗಳ ಮರಣಪತ್ರ ಬರೆದಿಟ್ಟಿರುವ ಕುರಿತು ಸತ್ಯಾಸತ್ಯ ಹೊರಬರಲು ತನಿಖೆಗೊಳಪಡಿಸಬೇಕು. ಸಾಯಬೇಕು ಎಂದು ನಿರ್ಣಯಿಸಿದ ವ್ಯಕ್ತಿಯ ಮಾನಸಿಕ ಸ್ಥಿತಿಯು ಸಮತೋಲನ ಕಳೆದುಕೊಳ್ಳುವ ಸಂಭವವೇ ಹೆಚ್ಚು. ಏಳು ಪುಟಗಳ ಮರಣಪತ್ರ ಬರೆಯುವಷ್ಟು ಸಹನೆ, ತಾಳ್ಮೆ ಇರುವುದಿಲ್ಲ ಮನಸ್ಸು ಬದಲಾಗುವ ಸಾಧ್ಯತೆ ಇರುತ್ತದೆ. ಸಚಿನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಷಡ್ಯಂತರ ಇರುವುದು ಅನುಮಾನ ಇದೆ ಹೀಗಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರ ಕೊಲೆಗೆ ಸಂಚು ಮಾಡಲಾಗಿದೆ ಎಂದು ಗುಲ್ಲೆಬ್ಬಿಸಿದ ಬಿಜೆಪಿಯವರ ವರ್ತನೆ ಅನುಮಾನಕ್ಕೆ ಎಡೆ ಮಾಡಿದೆ. ಆ ರೀತಿಯ ಸಂಚು ತಿಳಿದ ಮೇಲೆ ಸಚಿನ್ ಅವರು ಬಿಜೆಪಿ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮೊದಲೆ ತಿಳಿಸಬೇಕಿತ್ತು. ವಿಷಯ ಗೌಪ್ಯವಾಗಿಟ್ಟು ಡೆತ್ ನೋಟಿನಲ್ಲಿ ಆ ವಿಷಯ ಬರೆದಿಟ್ಟಿದ್ದು ಹಾಗೂ ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡಿದ್ದು ಅನೇಕ ಅನುಮಾನ ಹುಟ್ಟು ಹಾಕಿದೆ. ಸಚಿವರ ವಿರುದ್ಧ ಇಲ್ಲಸಲ್ಲದ ಅಪವಾದ, ಆರೋಪ ಮಾಡುವುದು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಗುತ್ತಿಗೆದಾರನಾಗಿರುವ ಸಚಿನ್ ಅವರು ಕಾಮಗಾರಿ ಗುತ್ತಿಗೆ ಪಡೆಯಲು ಹಣಕಾಸಿನ ಲೇವಾದೇವಿ ಮಾಡುವುದು ಸಹಜ. ತನ್ನ ಆರ್ಥಿಕ ಶಕ್ತಿಗೆ ಮೀರಿ ಸಾಲ ಅಥವಾ ಕೈಗಡವಾಗಿ ಪಡೆದ ಹಣ ಹಿಂತಿರುಗಿಸಲು ಸಾಧ್ಯವಾಗದ ಪರಿಸ್ಥಿತಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಅಲ್ಲಗಳೆಯುವಂತ್ತಿಲ್ಲ. ಆತ್ಮಹತ್ಯೆಗೆ ಮುಂಚೆ ತನಗೆ ಸಹಾಯ ಮಾಡಿದವರನ್ನೇ ತನ್ನ ಸಾವಿಗೆ ಹೊಣೆಗಾರರಾಗಿ ಮಾಡುವ ಉದ್ದೇಶದೊಂದಿಗೆ ಡೆತ್ ನೋಟ್ ಬರೆದಿರಬಹುದು. ಸಚಿನ್ ಅವರು ತನ್ನ ಆತ್ಮಹತ್ಯೆ ಸಾವಿನೊಂದಿಗೆ ಕಾಂಗ್ರೆಸ್, ಬಿಜೆಪಿ ಪಕ್ಷದ ಹೆಸರು ಉಲ್ಲೇಖಿಸಿ ಬರೆದು ಆತ್ಮಹತ್ಯೆಯಲ್ಲಿ ರಾಜಕೀಯ ಬೆರೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಸಂಬಂಧವೇ ಇಲ್ಲ ಹೀಗಾಗಿ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ ಮಾತನಾಡಿ, ಡೆತ್ ನೋಟಿನಲ್ಲಿರುವ ರಾಜು ಕಪನೂರ ಅವರೊಬ್ಬರೆ ಪ್ರಿಯಾಂಕ್ ಖರ್ಗೆ ಅವರ ಆಪ್ತರಲ್ಲ. ಪಕ್ಷದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅವರಿಗೆ ಆಪ್ತರು, ಅಭಿಮಾನಿಗಳಿದ್ದಾರೆ. ಅಂತಹವರ ವೈಯಕ್ತಿಕ ಬದುಕು ಮತ್ತು ಚಟುವಟಿಕೆಗಳಿಗೆ ಸಚಿವರು ಹೊಣೆಗಾರರಾಗಲು ಸಾಧ್ಯವೇ ಇಲ್ಲ. ಇದನ್ನು ಅರಿವಿದ್ದರೂ ಅರಿಯದಂತೆ ಆರೋಪ ಮಾಡುತ್ತಿರುವ ಬಿಜೆಪಿಯವರ ಮನಸ್ಸಿನಲ್ಲಿ ಸಚಿವರ ಬಗ್ಗೆ ದ್ವೇಷ, ಅಸೂಹೆ, ದುರುದ್ದೇಶವಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸಚಿವರ ರಾಜಕೀಯ ಬೆಳವಣಿಗೆ ಸಹಿಸಿಕೊಳ್ಳಲಾಗದೆ ಸಚಿವರ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಕಾಂಗ್ರೆಸ್ ಯುವ ಅಧ್ಯಕ್ಷ ಸಂಜಯ ಬುಳಕರ್, ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗಯ್ಯ ಗುತ್ತೇದಾರ, ಮುಖಂಡರಾದ ರವೀಂದ್ರ ರೆಡ್ಡಿ ಭಂಕಲಗಿ, ಓಂಕಾರೇಶ್ವರ ರೇಷ್ಮೀ, ವಿನ್ನುಕುಮಾರ ಜಡಿ ಇದ್ದರು.
“ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಬಿಜೆಪಿ ಮತ್ತು ಆರೆಸ್ಸೆಸ್ ಕುತಂತ್ರ ನಡೆಯಲ್ಲ, ಈಗಾಗಲೇ ಸಚಿವರು ಸಿಐಡಿ ತನಿಖೆಗೆ ಪತ್ರ ಬರೆದಿದ್ದಾರೆ. ಬಿಜೆಪಿ ಅವರು ಖರ್ಗೆ ಕುಟುಂಬದ ವಿರುದ್ಧ ಟೀಕೆ ಮಾಡಲು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬಿಟ್ಟಿದ್ದಾರೆ ಇವರೊಬ್ಬ ಬೊಗಳೇದಾಸರಾಗಿದ್ದಾರೆ”.-ಶಿವರುದ್ರಪ್ಪ ಭೀಣ್ಣಿ ಜಿಪಂ ಮಾಜಿ ಸದಸ್ಯರು.