ಚಿತ್ತಾಪುರ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಹಳ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನಿನ ಪಹಣಿಯಲ್ಲಿ ಇದ್ದಕ್ಕಿದ್ದಂತೆ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಕೈಬಿಡಬೇಕು, ಆಗಿರುವ ಪ್ರಮಾದಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಕಾನೂನುಬಾಹಿರ ಮಸೂದೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ತಾಪುರ ತಾಲೂಕು ಘಟಕದ ನೇತೃತ್ವದಲ್ಲಿ ರೈತ ಮುಖಂಡರು ಶುಕ್ರವಾರ ಪ್ರತಿಭಟಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮಾತನಾಡಿ, ರಾಜ್ಯದ ಹಲವೆಡೆ ರೈತರ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸುತ್ತಿರುವುದು ವಿಷಾದನೀಯ. ಇದರ ಹಿಂದೆ ರಾಜಕೀಯ ವ್ಯಕ್ತಿಗಳು ಇರುವುದರಿಂದಲೇ ದೊಡ್ಡ ಪ್ರಮಾಣದ ಪ್ರಮಾದ ನಡೆಯುತ್ತಿವೆ. ಉಪಚುನಾವಣೆಯಲ್ಲಿ ಹಿನ್ನಡೆ ಆಗಬಾರದೆಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿರಬಹುದು. ನೋಟಿಸ್ ಹಿಂಪಡೆಯುವುದು ಮಾತ್ರವಲ್ಲ, ಕಾನೂನುಬಾಹಿರ ಮಸೂದೆಯನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದರಿಂದ ಸಾವಿರಾರು ರೈತರು, ದೇವಸ್ಥಾನ, ಮಠಮಾನ್ಯಗಳ ಜಮೀನಿಗೆ ತೊಂದರೆಯಾಗಿದೆ. ವಿವಿಧತೆಯಲ್ಲಿ ಏಕತೆಯೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ, ಅವರವರ ಧರ್ಮ ಅವರವರಿಗೆ ಶ್ರೇಷ್ಠ ಆದರೆ ಇತರ ಧರ್ಮಗಳ ಬಗ್ಗೆ ಪೂರ್ವಗ್ರಹಪೀಡಿತರಾಗಿರುವ ಕೆಲವರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.
ಬಹಳ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಡಿ ಮಾಲೀಕರಿಗೆ ಗೊತ್ತಾಗದ ರೀತಿ ವಶಕ್ಕೆ ಪಡೆಯುತ್ತಿರುವುದು ಬಹುದೊಡ್ಡ ಅನ್ಯಾಯ. ಇದು ಯಾರಿಗೂ ಶೋಭೆ ತರುವಂಥದ್ದಲ್ಲ, ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಎಂದಿಗೂ ಕೈ ಹಾಕಬಾರದು ಎಂದು ಹೇಳಿದರು.
ರೈತ ಮುಖಂಡ ಮಲ್ಲಿಕಾರ್ಜುನ ಅಲ್ಲೂರಕರ್ ಮಾತನಾಡಿ, ವಕ್ಫ್ ಕಾಯ್ದೆಯಿಂದಾಗಿ ಜನರು ಅತಂತ್ರರಾಗುವ ಸ್ಥಿತಿ ಬಂದಿದೆ, ರೈತರ ಜಮೀನುಗಳನ್ನು ಮಾಲೀಕರಿಗೆ ಗೊತ್ತಾಗದ ರೀತಿ ವಶಕ್ಕೆ ಪಡೆಯುತ್ತಿರುವುದು ಅನ್ಯಾಯ, ಕಾನೂನುಬಾಹಿರ ಮಸೂದೆಯನ್ನೇ ರದ್ದುಪಡಿಸಬೇಕು. ರೈತರ, ಮಠಾಧೀಶರ ತಾಳ್ಮೆ ಪರೀಕ್ಷೆ ಮಾಡಬೇಡಿ, ಜ್ಯಾತ್ಯಾತೀತ ರಾಷ್ಟ್ರದಲ್ಲಿ ಜಾತೀಯತೆ ಮಾಡುತ್ತಿರುವ ಸಚಿವ ಜಮೀರ್ ಅಹಮದ್ ಉದ್ದಟತನ ಇಲ್ಲಿಗೆ ನಿಲ್ಲಿಸಬೇಕು ಇಲ್ಲದಿದ್ದರೆ ಕೆಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಿತ್ತಾಪುರ ತಾಲೂಕಿನಲ್ಲಿಯೂ ಸಹ ಸುಮಾರು 500 ಕ್ಕೂ ಅಧಿಕ ರೈತರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ ಎನ್ನುವ ವಿಷಯ ಗಮನಕ್ಕೆ ಬಂದಿದೆ ಕೂಡಲೇ ತಹಸೀಲ್ದಾರ್ ಅವರು ನೀಡಿರುವ ನೋಟೀಸ್ ವಾಪಸ್ ಪಡೆದು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ತೆಗೆದು ರೈತರ ಹೆಸರನ್ನು ನಮೂದಿಸಿ ಪಹಣಿ ಪತ್ರ ನೀಡಬೇಕು. ರೈತರಿಗೆ ಆದ ಪ್ರಮಾದ ಕೂಡಲೇ ಸರಿಪಡಿಸಿ ಅವರಲ್ಲಿನ ಆತಂಕ ದೂರಮಾಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರನ್ನು ಸಂಘಟಿಸಿ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸಲಿಂಗಗೌಡ ದಂಡಗುಂಡ, ಗೂಳಿ ಡಿಗ್ಗಿ, ಗುರುಲಿಂಗ ಹಳ್ಳಿ ಮಿನಿ, ಯಲ್ಲಪ್ಪ ಸಾಲಹಳ್ಳಿ, ಮಲ್ಲಿಕಾರ್ಜುನ ಮಲಬೊ, ಮಲ್ಲಪ್ಪ ಎಮ್ಮೆನೋರ, ಬಸವರಾಜ ಶೇರಿ, ಮಹೇಶ್ ಇಟಗಿ ಸೇರಿದಂತೆ ಅನೇಕರು ಇದ್ದರು.