ರಂಗ ನೃಪತುಂಗ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಚಿತ್ತಾಪುರ ಏಳು ಕಲಾವಿದರ ಆಯ್ಕೆ: ಸಂಗಣ್ಣ ಅಲ್ದಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘ ಸೇಡಂ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಕೊಡಮಾಡುತ್ತಿರುವ ಜಿಲ್ಲಾ ಮಟ್ಟದ ರಂಗ ನೃಪತುಂಗ ಪ್ರಶಸ್ತಿಗೆ ಒಟ್ಟು 21 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಚಿತ್ತಾಪುರ ತಾಲೂಕಿನ 7 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ನಾಟ್ಯ ಸಂಘದ ಅಧ್ಯಕ್ಷ ಸಂಗಣ್ಣ ಅಲ್ದಿ ಮಲಕೂಡ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘ ಕಳೆದ ಎರಡು ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿದ ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ, ಪ್ರಸ್ತುತ ಎರಡನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಚಿತ್ತಾಪುರ ತಾಲೂಕಿನ 7 ಜನ ಹಿರಿಯ ಕಲಾವಿದರಾದ ಸೋಮಶೇಖರ ಪಾಟೀಲ ಮಲಕೂಡ, ಶಿವಣ್ಣ ಹಿಟ್ಟಿನ್, ಶರಣು ಕೊಟಗಿ ಸಪ್ಪಂಡಿ, ದತ್ತಾತ್ರೇಯ ಬುಕ್ಕಾ ಹಲಕರ್ಟಿ, ಬಾಬು ಕಾಶಿ, ವಿರೇಶ ಇಟಗಿ ಕರದಾಳ, ಸಿದ್ದು ದುತ್ತರಗಿ ಅವರನ್ನು ರಂಗ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪರಿಸರ ಪ್ರಜ್ಞೆ ಮೂಡಿಸಲು ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಒಂದೊಂದು ಸಸಿ ನೀಡಲಾಗುವುದು ಹಾಗೂ ವೀರಯ್ಯ ಸ್ವಾಮಿ ಮೂಲಿಮಠ ಅವರ ಸ್ನೇಹನಾ ಪ್ರೀತಿನಾ ನಾಟಕ ಏರ್ಪಡಿಸಿದ್ದು ಉಚಿತವಾಗಿರಲಿದೆ ಎಂದರು.
ಸೇಡಂ ಪಟ್ಟಣದ ಕರ್ನಾಟಕ ಸುವರ್ಣ ಭವನದಲ್ಲಿ ಬರುವ ಅಕ್ಟೋಬರ್ 22 ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ ಅಧ್ಯಕ್ಷ ಸಂಗಣ್ಣ ಅಲ್ದಿ ಅವರು ಆಯ್ಕೆ ಪತ್ರ ನೀಡಿ, ಸನ್ಮಾನಿಸಿ ಆಮಂತ್ರಿಸಿದರು.
ನಾಟ್ಯ ಸಂಘದ ಉಪಾಧ್ಯಕ್ಷ ರಾಜಶೇಖರ್ ಮಂಗಲಗಿ, ಕಲಾವಿದರಾದ ಶಿವಶರಣಪ್ಪ ಶಿರವಾಳ ಕಮರವಾಡಿ, ಸೇಡಂ, ಶಂಕರ ಗುಗ್ಗರಿ, ಮಲ್ಲಿಕಾರ್ಜುನ ನೀಲಿ ಮಲಕೂಡ, ಸೋಮಶೇಖರ ಯದಲಾಪೂರ, ಬಸವರಾಜ ಸಂಕನೂರ ಇದ್ದರು.