ರಾವೂರ ಗ್ರಾಮದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ
ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ವಿರುದ್ಧ ರೈತರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಂಪನಿಯು ರೈತರಿಗೆ ನೀಡಿದ ಭರವಸೆಯಂತೆ ನಡೆಯುತ್ತಿಲ್ಲ ಎಂದು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ವಿರುದ್ಧ ರೈತರು ಜಿಲ್ಲಾಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಮತಕ್ಷೇತ್ರದ ರಾವೂರ ಗ್ರಾಮದ ಡಿವೈನ್ ಫಂಕ್ಷನ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದ ರೈತರು, ನಾವು ನಮ್ಮ ಜಮೀನು ಕಂಪೆನಿಗೆ ನೀಡಲು ನಿರಾಕರಿಸಲಿಲ್ಲ, ಅದರೆ ಕಂಪನಿಯವರು ಜಮೀನು ತೆಗೆದುಕೊಳ್ಳವಾಗ ನೀಡಿದ ಮಾತಿನಂತೆ ನಡೆದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿಯವರು ಬಡ ರೈತರ ಫಲವತ್ತಾದ ಜಮೀನು ತೆಗೆದುಕೊಳ್ಳುವಾಗ ಒಂದು ಮಾತು ಈಗೊಂದು ಮಾತು ಆಡುತ್ತಿದ್ದಾರೆ. ಕಂಪನಿಯವರು ಮೊದಲು ಜಾಬ್ ಕಾರ್ಡ್ ಕುರಿತು ಲಿಖಿತ ರೂಪದಲ್ಲಿ ಭರವಸೆ ನೀಡಲಿ, ಜಮೀನು ನೀಡಿದ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡಬೇಕು. ಈ ಭಾಗದಲ್ಲಿ ಸಾಕಷ್ಟು ಬಡವರ ಮಕ್ಕಳು ಐಟಿಐ, ಡಿಪ್ಲೋಮಾ ಸೇರಿದಂತೆ ವಿವಿಧ ಕೋರ್ಸಗಳು ಮಾಡಿದ್ದಾರೆ ಅವರ ವಿದ್ಯಾಭ್ಯಾಸದ ಅನುಗುಣವಾಗಿ ಅವರಿಗೆ ಟ್ರೇನಿಂಗ್ ಕೊಟ್ಟು ನೌಕರಿ ನೀಡಲಿ ಎಂದು ಆಗ್ರಹಿಸಿದರು.
ಕಂಪನಿಯವರು ಜಮೀನು ತೆಗೆದುಕೊಳ್ಳುವಾಗ ಮಾಡಿದ ವಾಗ್ದಾನದಂತೆ ಪ್ರತಿಯೊಬ್ಬರ ಕುಟುಂಬದ ಸದಸ್ಯನಿಗೆ ನೌಕರಿ ನೀಡಬೇಕು, ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು, ರಾವೂರ ಗ್ರಾಮದ ಅಭಿವೃದ್ದಿಗೆ ಒತ್ತು ನೀಡಬೇಕೆಂಬ ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ರೈತರು ಪ್ರಸ್ತಾಪ ಮಾಡಿದರು.
ಕಲಬುರಗಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಮಾತನಾಡಿ, ಯಾವುದೇ ಕಾರಣಕ್ಕೂ ಜಮೀನು ನೀಡಿದ ರೈತರಿಗೆ ಅನ್ಯಾಯವಾಗಲು ಜಿಲ್ಲಾಡಳಿತ ಬೀಡುವುದಿಲ್ಲ, ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಅದನ್ನು ಪರಿಹಾರ ನೀಡುವ ಕೆಲಸ ಮಾಡುತ್ತೇವೆ, ಜಮೀನು ಕಳೆದುಕೊಂಡ ರೈತರಿಗೆ ಪ್ರತಿ ಕುಟುಂಬಗಳಿಗೆ ಅವರ ವಿದ್ಯಾಭ್ಯಾಸದ ಅನುಗುಣವಾಗಿ ಒಬ್ಬರಿಗೆ ನೌಕರಿ ನೀಡುವ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಬೇಕೆಂದು ಜಮೀನು ನೀಡಿದ ರೈತರ ಮುಖ್ಯ ಬೇಡಿಕೆಯಾಗಿದೆ. ಒಂದು ವಾರದೊಳಗೆ ಲಿಖಿತ ರೂಪದಲ್ಲಿ ನೀಡಲು ಕಂಪನಿಗೆ ಹೇಳಿದ್ದು, ಮತ್ತು ಮಧ್ಯವರ್ತಿಗಳು ಇಲ್ಲದೆ ನೇರವಾಗಿ ರೈತರಿಂದ ಜಮೀನು ಖರೀದಿ ಮಾಡಬೇಕು. ಜಾಮೀನು ನೀಡಿದ ರೈತರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಲಿಖಿತವಾಗಿ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
1600 ಟಿಪಿಎಚ್ ಸಾಮರ್ಥ್ಯದ ಕ್ರಷರ್ ಸ್ಥಾಪನೆಯ ಪ್ರಸ್ತಾವನೆ: ಅಲ್ಟ್ರಾಟೆಕ್ ಸಿಮೆಂಟ ಲಿಮಿಟೆಡನವರು ಚಿತ್ತಾಪುರ ತಾಲೂಕಿನ ರಾವೂರ, ಯರಗಲ್ ಮತ್ತು ಕೆ ನಾಗಾವ್ ಗ್ರಾಮಗಳ ವಿವಿಧ ಸರ್ವೆ ನಂಬರ್ ಒಟ್ಟು 713 ಹೆಕ್ಟೇರ್ ಪ್ರದೇಶದಲ್ಲಿ 5.10 ಎಂ.ಟಿ.ಪಿ.ಎ ಉತ್ಪಾದನಾ ಸಾಮರ್ಥ್ಯದ ಸುಣ್ಣದ ಕಲ್ಲು ಗಣಿಗಾರಿಕೆ, ಮೇಲಿನ ಮಣ್ಣು 0.0022 ಎಂಟಿಪಿಎ ಅಧಿಕ ಭಾರ 0.454 ಎಂಟಿಪಿಎ ಒಟ್ಟು ಉತ್ಪನ, ಎಂಟಿಪಿಎ ವೋಬ್ಲರ್ ಜೊತೆಗೆ 1600 ಟಿಪಿಎಚ್ ಸಾಮರ್ಥ್ಯದ ಕ್ರಷರ್ ಸ್ಥಾಪನೆಯ ಪ್ರಸ್ತಾವನೆ ಅನುಮೋದನೆಗೊಂಡಿದೆ.
ಈ ಸಂದರ್ಭದಲ್ಲಿ ಪರಿಸರ ಹಿರಿಯ ಅಧಿಕಾರಿ ರೇಖಾ, ಪರಿಸರ ಅಧಿಕಾರಿ ಕೆ.ಎಂ ಸೋಮಶೇಖರ್, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಂಪೆನಿ ಅಧ್ಯಕ್ಷ ಉದಯ ಪವಾರ, ಉಪಾಧ್ಯಕ್ಷ ನಾರಾಯಣ, ರವಿಕುಮಾರ್ ಸೋಮಶೇಖರ, ಶಹಾಬಾದ ತಹಸೀಲ್ದಾರ್ ಜಗದೀಶ್, ಪ್ರಮುಖ ರೈತ ಮುಖಂಡರಾದ ಅಜೀಜ್ ಸೇಠ್, ಅಶೋಕ್ ಸಗರ್, ಸೂರ್ಯಕಾಂತ ಕಟ್ಟಿಮನಿ, ಗುರುನಾಥ ಗುದಗಲ್, ಶಿವರುದ್ರ ಭಿಣ್ಣಿ, ಮಹೇಶ್ ಬಾಳಿ, ಗೋವಿಂದ ಸಗರ್, ಶರಣು ಜ್ಯೋತಿ, ತಿಪ್ಪಣ್ಣ ವಗ್ಗರ್, ಜಗದೀಶ್ ಚವ್ಹಾಣ, ಪೀರೋಜ್, ಮಲ್ಲಿಕಾರ್ಜುನ ಹೋನಗುಂಟಿ, ಸಿದ್ದಪ್ಪ ರಾವೂರ, ಭೀಮಾಶಂಕರ ರಾವೂರ, ಸೇರಿದಂತೆ ಪೋಲಿಸ್ ಅಧಿಕಾರಿಗಳಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐಗಳಾದ ಶ್ರೀಶೈಲ ಅಂಬಾಟಿ, ತಿರುಮಲೇಶ್ ಕುಂಬಾರ ಸೇರಿದಂತೆ ಅನೇಕರು ಇದ್ದರು.
“ಈ ಭಾಗದ ಸಮಗ್ರ ಅಭಿವೃದ್ದಿ ಮತ್ತು ನಿರುದ್ಯೋಗ ಸಮಸ್ಯೆಯನ್ನು ಪರಿಹಾರವಾಗವೆಂಬ ಹಿತದೃಷ್ಠಿಯಿಂದ ರೈತರು ತಮ್ಮ ಫಲವತ್ತಾದ ಜಮೀನು ನೀಡಿದ್ದಾರೆ. ಜಮೀನು ತೆಗೆದುಕೊಳ್ಳವ ಸಮಯದಲ್ಲಿ ಕೊಟ್ಟ ಮಾತಿನಂತೆ ಕಂಪನಿಯವರು ನಡೆದುಕೊಳ್ಳಬೇಕು. ರೈತರಿಂದ ನೇರವಾಗಿ ಜಮೀನು ಕೇಳಿ ಪಡೆಯಬೇಕು. ನಮ್ಮ ಬೇಡಿಕೆಗಳು ಈಡೇರಿಸುವರೆಗೆ ಯಾವುದೇ ಕಾರಣಕ್ಕೂ ರಾಜೀಯಾಗುವ ಪ್ರಶ್ನೇ ಇಲ್ಲ”.-ಶ್ರೀನಿವಾಸ ಸಗರ ಹಿರಿಯ ಮುಖಂಡರು ರಾವೂರ.
“ಕಂಪೆನಿಯವರು ಈ ಮೊದಲು ಜಮೀನು ನೀಡಿದ ಕುಟುಂಬಕ್ಕೆ ನೌಕರಿ ನೀಡುವ ಭರವಸೆ ನೀಡಿತ್ತು ಈಗ ಇಲ್ಲಾ ಅಂತಾ ಹೇಳುವುದು ನೋಡಿದರೆ ನಮಗೆ ಕಂಪನಿಯ ಮೇಲೆ ನಂಬಿಕೆ ಇಲ್ಲಾ ಆದ್ದರಿಂದ ಜಿಲ್ಲಾಧಿಕಾರಿಗಳಾದ ನೀವು ನಮ್ಮ ತಾಯಿಯಾಗಿ ಈ ಸಭೆಗೆ ಬಂದಿರಿ ನಿಮ್ಮ ಈ ರೈತ ಮಕ್ಕಳಿಗೆ ನ್ಯಾಯ ಒದಗಿಸಿ”.-ಜಮೀನು ಕಳೆದುಕೊಂಡ ರೈತರು.