ರೇವಗ್ಗಿ (ರಟಕಲ್) ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವ, ಮಾ. 12 ಕ್ಕೆ ಶ್ರೀ ರೇವಣಸಿದ್ದೇಶ್ವರ ಭವ್ಯ ರಥೋತ್ಸವ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಶ್ರೀ ರೇಣುಕಾಚಾರ್ಯರ ಜಯಂತಿ ಮಹೋತ್ಸವ ನಿಮಿತ್ತ ಮಾ.12 ರಂದು ಸಾಯಂಕಾಲ 5 ಗಂಟೆಗೆ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಭವ್ಯ ರಥೋತ್ಸವವು ವಿಜೃಂಬಣೆಯಿಂದ ಜರುಗುವುದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ರೇವಣಸಿದ್ದೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ನೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಆಡಳಿತಾಧಿಕಾರಿಗಳಾದ ಪ್ರಭುರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಭವ್ಯ ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ದಿ.11 ರಂದು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವದವರೆಗೆ ಆಕಾಶವಾಣಿ ಕಲಾವಿದರಿಂದ ಸಂಗೀತ ಭಜನೆ ಜರುಗುವುದು, ದಿ. 12 ರಂದು ಬೆಳಿಗ್ಗೆ ಅಮೃತಸಿದ್ಧಿಯೋಗದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ತದನಂತರ ಮಹಾ ಮಂಗಳಾರತಿ, ಮುಂಜಾನೆ 8 ಗಂಟೆಗೆ ದೀಕ್ಷಾ, ಕಳಸಾರೋಹಣ ಹಾಗೂ ಜಂಗಮ ವಟುಗಳಿಗೆ. ಅಯ್ಯಾಚಾರ ಕಾರ್ಯಕ್ರಮ, ತೊಟ್ಟಿಲೋತ್ಸವ ಕಾರ್ಯಕ್ರಮ ನಂತರ ಮಹಾಪ್ರಸಾದ, ಸಾಯಂಕಾಲ 5 ಗಂಟೆಗೆ ಭವ್ಯ ನಂದಿಕೋಲ ಮತ್ತು ಸಕಲ ವಾಧ್ಯಗಳೊಂದಿಗೆ ಭವ್ಯ ರಥೋತ್ಸವ ಜರುಗುವುದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೇವಣಸಿದ್ದೇಶ್ವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದ್ದಾರೆ.
ಭಾರತದ ಪುಣ್ಯಭೂಮಿ ತ್ರಿಲಿಂಗ ದೇಶದ ಕೊಲನಪಾಕದಲ್ಲಿ ಶ್ರೀ ಸೋಮೇಶ್ವರ ಲಿಂಗದಿಂದ ವೀರಶೈವ ಧರ್ಮಗುರು, ಜಗದ್ಗುರು ಶ್ರೀ ರೇವಣಸಿದ್ದೇಶ್ವರರು ಉದ್ಭವಿಸಿ, ಅರಿತು ಏಳುನೂರು ವರ್ಷ, ಅರಿಯದೇ ಏಳನೂರ ವರ್ಷ ಭರತ ಭೂಮಂಡಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ- ಶ್ರೀಲಂಕಾದವರೆಗೂ ಸಂಚಾರಗೈದು ವೀರಶೈವ ಧರ್ಮವನ್ನು ಸ್ಥಾಪನೆ ಮಾಡಿ ಬೆಳೆಸಿ ಧರ್ಮ ರಕ್ಷಣೆಗಾಗಿ ಶ್ರೀ ರಂಭಾಪುರಿ, ಉಜ್ಜಯನಿ, ಕೇದಾರ, ಶ್ರೀಶೈಲ, ಕಾಶಿ ಈ ಪುಣ್ಯಸ್ಥಾನಗಳಲ್ಲಿ ಪಂಚಪೀಠಗಳನ್ನು ನೆಲೆಗೊಳಿಸಿದ್ದಾರೆ. ಶ್ರೀ ರೇವಣಸಿದ್ದೇಶ್ವರ ದೇವರು ಬಯಸಿ ಬಂದ ಭಕ್ತರಿಗೆ ಬೇಡಿದ ನೀಡುವ ಕಾಮಧೇನು ಕಲ್ಪವೃಕ್ಷ ಆಗಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ.