ಚಿತ್ತಾಪುರ ರಿಕ್ರಿಯೇಷನ್ ಶಾಲೆಯ ಮಕ್ಕಳ ಬೀಳ್ಕೊಡುಗೆ ಸಮಾರಂಭ, ಮಕ್ಕಳಿಗೆ ಚಟುವಟಿಕೆಯುಕ್ತ ಶಿಕ್ಷಣ ನೀಡಿ: ನಂದೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಆಗಬೇಕು ಕನ್ನಡ ಮಾಧ್ಯಮ ಶಾಲೆಗಳು ಈಗಿನ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಪೋಟಿಯಲ್ಲಿ ಗುಣಾತ್ಮಕವಾಗಿ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕಲಿಕಾ ಯೋಜನೆ ರೂಪಿಸಿಕೊಂಡು ಮಕ್ಕಳಿಗೆ ಚಟುವಟಿಕೆಯುಕ್ತವಾಗಿ ಶಿಕ್ಷಣ ನೀಡಬೇಕು ಎಂದು ನಿವೃತ್ತಿ ಶಿಕ್ಷಕ ದೇವಪ್ಪ ನಂದೂರಕರ್ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ರಿಕ್ರಿಯೇಷನ್ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 7 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳು ಉತ್ತಮ ರೀತಿಯಲ್ಲಿ ಬೆಳೆಯುವಂತಾಗಲಿ ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಸಂಸ್ಥೆಯಲ್ಲಿ ಹೆಚ್ಚಿನ ದಾಖಲಾತಿ ಹೊಂದುವುದಕ್ಕೆ ತಮ್ಮ ಪ್ರಯತ್ನ ಪಾಲಕರ ಮನವೊಲಿಸುವಿಕೆ ಮತ್ತು ಸಮುದಾಯದೊಡನೆ ಸಂಪರ್ಕ ಚನ್ನಾಗಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷವಾಗಿ ಪಾಲಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಬೇಕು, ಮಕ್ಕಳು ಕೂಡ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಇಚ್ಚೆ ಪಟ್ಟು ಕಲಿಯಬೇಕು. ಬಾಲಕ ಪಾಲಕ ಮತ್ತು ಶಿಕ್ಷಕ ಈ ಮೂವರ ಪಾತ್ರ ಶಿಕ್ಷಣದಲ್ಲಿ ಪ್ರಾಮುಖ್ಯವಾಗಿದೆ ಎಂದರು.
ಅಥಿತಿಗಳಾಗಿ ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗುತ್ತೇದಾರ ಕರದಾಳ, ಕೋಲಿ ಸಮಾಜದ ನಗರಾಧ್ಯಕ್ಷ ಪ್ರಭು ಹಲಕರ್ಟಿ ಪಾಲಕರ ಪ್ರತಿನಿಧಿ ಶೇಕಪ್ಪ, ಶಾಲೆಯ ಹಿರಿಯ ಶಿಕ್ಷಕ ಮತ್ತು ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಸ್ತಾನ ಪಟೇಲ್ ವೇದಿಕೆ ಮೇಲಿದ್ದರು, ಶಾಲಾ ಮುಖ್ಯ ಗುರು ಗುರುಸಿದ್ದಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಬೇಬಿ ಮಸ್ತಾನ ಪಟೇಲ್, ಶಿಕ್ಷಕರಾದ ನಾಗಪ್ಪ, ಸೋಮಶೇಖರ್, ಸಂಗೀತಾ ಬಾಳಿ, ಸುಮಂಗಲಾ, ಶ್ವೇತಾ ಸೇರಿದಂತೆ ಇತರರು ಇದ್ದರು.
ಶಿಕ್ಷಕ ಸೋಮಶೇಖರ್ ಸ್ವಾಮಿ ಸ್ವಾಗತಿಸಿದರು, ಜಗನಾಥ ನಿರೂಪಿಸಿದರು, ನಾಗಪ್ಪ ವಂದನಾರ್ಪಣೆ ಮಾಡಿದರು. ನಂತರ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಮಗಳು ನಡೆದವು.