ಕಾಳಗಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಬಾಲಕಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪಟ್ಟಣದ ನಿವಾಸಿ ಚಿತ್ತಾಪುರ ತಾಲೂಕಿನ ಕರದಾಳ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ನರಸಪ್ಪ ಜಾಣ ಅವರ ಪುತ್ರಿ ಜಾಹ್ನವಿ (16) ಗುರುವಾರ ಅನಾರೋಗ್ಯದಿಂದ ನಿಧನಳಾದಳು.
ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಜಾಹ್ನವಿಗೆ ಎರಡ್ಮೂರು ದಿನದಿಂದ ಆರೋಗ್ಯ ಸರಿಯಿಲ್ಲದಕ್ಕೆ ಚಿಕಿತ್ಸೆಗಾಗಿ ಬುಧವಾರ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಗುರುವಾರ ಅವಳು ಮೃತಪಟ್ಟಳು.
ಕಲಬುರಗಿಯಿಂದ ಮೃತದೇಹ ಮನೆಗೆ ತಂದ ಕೂಡಲೇ ಶಿಕ್ಷಕ ನರಸಪ್ಪ ಅವರು, ಮುದ್ದುಮಗಳ ಶರೀರ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನನ್ನ ಮಗಳ ಕಣ್ಣು ಈ ಜಗತ್ತನ್ನು ಇನ್ನೂ ನೋಡಬೇಕು. ಅಂಧರ ಬದುಕಿಗೆ ಬೆಳಕಾಗಬೇಕು. ಅವಳ ಕಣ್ಣು ದಾನ ಮಾಡುತ್ತೇನೆ ಎಂದು ಸ್ಥಳೀಯ ಆಸ್ಪತ್ರೆ ಸಿಬ್ಬಂದಿ ಮೂಲಕ ಜಿಮ್ಸ್ ಆಸ್ಪತ್ರೆಯ ನೇತ್ರ ಬ್ಯಾಂಕನ್ನು ಸಂಪರ್ಕಿಸಿದರು.
ಜಿಮ್ಸ್ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಆಗಮಿಸಿದ ನೇತ್ರ ಬ್ಯಾಂಕಿನ ಡಾ.ಅರ್ಚನಾ, ಡಾ.ಮಮತಾ ಹಾಗೂ ಸ್ಥಳೀಯ ನೇತ್ರಾಧಿಕಾರಿ ಸಿದ್ರಾಮಯ್ಯ ಹಿರೇಮಠ ಅವರು ಮೃತ ಬಾಲಕಿಯ ಎರಡೂ ಕಣ್ಣು ತೆಗೆದುಕೊಂಡು ತೆರಳಿದರು. ಮೃತ ಮಗುವಿನ ದೃಷ್ಟಿ ಅಂಧರಿಗೆ ಬೆಳಕು ನೀಡಲಿದೆ. ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ ಎಂದು ವೈದ್ಯರು ಪ್ರತಿಕ್ರಿಯಿಸಿದರು.