ಛಲವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷಮೆ ಕೋರುವಂತೆ ಭೀಮನಗೌಡ ಪರಗೊಂಡ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಅಸಂವಿಧಾನಿಕ ಶಬ್ದ ಬಳಸಿ ಕೀಳು ಮಟ್ಟದ ಟೀಕೆ ಮಾಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ವಕೀಲರು ಹಾಗೂ ಕೆಪಿಸಿಸಿ ಪದವೀಧರ ವಿಭಾಗದ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪರಗೊಂಡ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಸಂಯೋಜಕ ಸಂದೀಪ ಮಾಳಗೆ ಅವರು ಆಗ್ರಹಿಸಿದ್ದಾರೆ.

ಈ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾನಸಿಕ ಸ್ವಾಸ್ತ್ಯ ಕಳೆದುಕೊಂಡು, ನಾಲಿಗೆಗೆ ಬಂದಂತೆ ಮಾತನಾಡಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತೇಜೋವಧೆ ಮಾಡಿದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ರಾಜಕೀಯವನ್ನು ಆರಂಭಿಸಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜಕೀಯವಾಗಿ ಬೆಳೆದು, ಅಂತಿಮವಾಗಿ ಸಂವಿಧಾನ ವಿರೋಧಿ ಮತ್ತು ಜನವಿರೋಧಿ ಬಿಜೆಪಿಯನ್ನು ಸೇರಿ, ತಲೆಯ ಮೇಲೆ ಸಂವಿಧಾನದ ಬದಲಿಗೆ ಚಡ್ಡಿಯನ್ನು ಹೊತ್ತು, ಸಂವಿಧಾನಕ್ಕಿಂತ ಚೆಡ್ಡಿ ಮುಖ್ಯವೆಂದು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಟ್ಟ ಬಿಜೆಪಿಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಅತ್ಯಂತ ಕೀಳು ಮಟ್ಟದ ಶಬ್ದಗಳನ್ನ ಬಳಸಿ ಮಾತನಾಡಿರುವುದು ಖಂಡನೀಯವಾಗಿದ್ದು, ಛಲವಾದಿಯವರಲ್ಲಿ ಮನುಷ್ಯತ್ವ ಇದ್ದರೆ, ಸಂವಿಧಾನದ ಆಶಯಗಳು ಇದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ನಿಜವಾದ ಅಭಿಮಾನ ಇದ್ದರೆ ಅವರು ಕೂಡಲೇ ಸಚಿವ ಪ್ರಿಯಾಂಕ ಖರ್ಗೆ ಅವರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಛಲವಾದಿ ನಾರಾಯಣ ಸ್ವಾಮಿಯವರು ರಾಹುಲ್ ಗಾಂಧಿಯವರನ್ನು ಬಚ್ಚಾ ಅಂತ ಕರೆದಿದ್ದು, ಈಗ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಕೆಟ್ಟ ಶಬ್ದದಿಂದ ಹೋಲಿಕೆ ಮಾಡಿರುವುದು ಆಕ್ಷೇಪ ಮತ್ತು ಕೀಳು ಮನಸ್ಥಿತಿಯಿಂದ ಕೂಡಿದ್ದು ಅದು ಸಂವಿಧಾನ ವಿರೋಧಿ ಆಗಿದೆ. ವಿಧಾನ ಪರಿಷತ್ ಹುದ್ದೆ ಎಂತದ್ದು, ಅದರಲ್ಲೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅಂದರೆ ಮಾತಿನ ಶೈಲಿ ಹೇಗಿರಬೇಕು ಎಂತ ಶಬ್ದಗಳು ಮಾತಾಡಬೇಕು ಎಂಬುದನ್ನು ಇಲ್ಲಿಯವರೆಗೆ ಕಲಿಯದ ನಾರಾಯಣ ಸ್ವಾಮಿಯವರ ವರ್ತನೆ ಕೋತಿಯ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ. ಇದೇ ತರಹ ಛಲವಾದಿ ನಾರಾಯಣ ಸ್ವಾಮಿಯವರು ತಮ್ಮ ವರ್ತನೆಯನ್ನು ಬದಲಿಸದೆ ಮುಂದುವರಿದರೆ, ಅವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಧಾನ ಪರಿಷತ್ತಿನ ಸಭಾಪತಿಯವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!