ಕಲಬುರ್ಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಫಲ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಅಯ್ಯಪ್ಪ ರಾಮತೀರ್ಥ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಾಲು ಉತ್ಪಾದಕರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಅಯ್ಯಪ್ಪ ರಾಮತೀರ್ಥ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಹಾಗೂ ಶಾಸಕ ಮುನಿರತ್ನ ಅವರ ಮೇಲೆ ಬಹಿರಂಗವಾಗಿ ಮೊಟ್ಟೆ ಎಸೆದಿರುವ ಪ್ರಕರಣ ಈಗ ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರ ಕೊಲೆಗೆ ಸಂಚು ಹೀಗೆ ಸಾಲು ಸಾಲು ಹಲ್ಲೆ, ಕೊಲೆ ಬೆದರಿಕೆಗಳು ನಡೆದು ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಹಾಗೂ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ 2013 ರಿಂದ ಇಲ್ಲಿಯವರೆಗೆ ಶಾಸಕರಾಗಿ ಹಾಗೂ ಸಚಿವರಾಗಿ ಅಭಿವೃದ್ಧಿ ಕೆಲಸಗಳು ಮಾಡುವುದನ್ನು ಬಿಟ್ಟು ಕೇವಲ ದ್ವೇಷದ ಹಾಗೂ ಅಸೂಯೆಗಳ ರಾಜಕೀಯ ಮಾಡುತ್ತಿರುವುದು ದುರಂತ. ತಮ್ಮ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಪರೋಕ್ಷವಾಗಿ ಗೂಂಡಾಗಳನ್ನು ಪ್ರೋತ್ಸಾಹಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರ, ಜ್ಞಾನ ಮತ್ತು ಸಮರ್ಪಣೆ ಮನೋಭಾವ ಬೆಳೆಸಿಕೊಂಡು ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಹೇಳಿದರು. ಸಂವಿಧಾನಬದ್ಧವಾದ ಅಧಿಕಾರದಲ್ಲಿ ಕುಳಿತಿರುವ ಸಚಿವರು ಕಲಬುರ್ಗಿ ಮಹಾಜನತೆಗೆ ನೆಮ್ಮದಿ ಹಾಗೂ ಸುರಕ್ಷತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟು ಪುಂಡಾಟಿಕೆಯನ್ನು ಮಾಡುತ್ತಿರುವ ಕ್ರಿಮಿನಲ್ ಗಳನ್ನು ಮಟ್ಟ ಹಾಕಿ, ಆಗದಿದ್ದರೆ ನಿಮ್ಮ ಕುರ್ಚಿಯನ್ನು ಖಾಲಿ ಮಾಡಿ ಎಂದು ಒತ್ತಾಯಿಸಿದ್ದಾರೆ.