ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರು ಕನಿಷ್ಟ ಒಂದು ಪುಸ್ತಕವಾದರೂ ಖರೀದಿಸಿ: ಸಿದ್ದಲಿಂಗ ಬಾಳಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಇದೇ ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯದಲ್ಲಿ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಈ ಸಂಭ್ರಮದ ನುಡಿ ಜಾತ್ರೆಗೆ ಹೋಗುವವರು ಅಲ್ಲಿಂದ ಕನಿಷ್ಟ ಒಂದು ಪುಸ್ತಕವಾದರೂ ಖರೀದಿಸಿ ಎಂದು ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ರಾವೂರ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಒಂದು ಕಡೆ ಪುಸ್ತಕಗಳ ಪ್ರಕಟಣೆಗಳು ಹೆಚ್ಚುತ್ತಿವೆ. ಆದರೆ ಅವುಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಸಮ್ಮೇಳನದಲ್ಲಿರುವ ಪುಸ್ತಕ ಮಳಿಗೆಗಳಿಂದ ಕನಿಷ್ಟ ಒಂದು ಪುಸ್ತಕವಾದರೂ ಕೊಂಡುಕೊಳ್ಳಬೇಕು. ಇದರಿಂದ ಪುಸ್ತಕ ಬರೆಯುವವರಿಗೆ, ಪ್ರಕಾಶಕರಿಗೂ, ಮಾರಾಟಗಾರರಿಗೂ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದು ತಿಳಿಸಿದ್ದಾರೆ.
ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ತಿಂಡಿ ತಿನಿಸು, ಗೃಹಬಳಕೆ ವಸ್ತುಗಳು, ಬಟ್ಟೆ ಹೀಗೆ ಹಲವು ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ತೋರಿಸುವ ಆಸಕ್ತಿಯನ್ನು ಪುಸ್ತಕಗಳನ್ನು ಕೊಳ್ಳುವಲ್ಲಿ ತೋರಿಸುವುದಿಲ್ಲ ಆದ್ದರಿಂದ ಜನರು ಪುಸ್ತಕಗಳನ್ನು ಕೊಳ್ಳಬೇಕು ಎಂದು ಬಾಳಿಯವರು ಮನವಿ ಮಾಡಿದ್ದಾರೆ.