ಸಾತನೂರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಹಾಗೂ ಪಿಡಿಒ ಅವರಿಂದ ಅವ್ಯವಹಾರ, ತನಿಖೆ ಕೈಗೊಂಡು ಕಾನೂನು ಕ್ರಮಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಾತನೂರ ಗ್ರಾಮ ಪಂಚಾಯಿತಿನಲ್ಲಿ 15 ನೇ ಹಣಕಾಸು, ಪಂಚಾಯತ್ ಸ್ವಂತ ನಿಧಿ ಯೋಜನೆಯಡಿ ಯಾವುದೇ ಕಾಮಗಾರಿ ಮಾಡದೆ ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ವಿವಿಧ ಬ್ಯಾಂಕ್ ಖಾತೆಗಳಿಂದ ಅಧ್ಯಕ್ಷರು ಮತ್ತು ಪಿಡಿಒ ಅವರು 27 ಲಕ್ಷ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಕೂಡಲೇ ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮೈಪಾಲ್ ಮೂಲಿಮನಿ ಆಗ್ರಹಿಸಿದ್ದಾರೆ.
ತಾಲೂಕಿನ ಸಾತನೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ತನಿಖೆ ಕೈಗೊಳ್ಳಬೇಕು ಎಂದು ಈಗಾಗಲೇ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸಾತನೂರು ಪಂಚಾಯತಿಯಲ್ಲಿ ಒಂದು ವರ್ಷ ಕಳೆದರೂ ಒಂದು ಸಾಮಾನ್ಯ ಸಭೆ, ವಿಶೇಷ ಸಭೆ, ತುರ್ತು ಸಭೆ, ವಾರ್ಡ್ ಸಭೆ ಕರೆದಿಲ್ಲ. ಯಾವುದೇ ಸಮಿತಿಗಳು ರಚನೆ ಮಾಡಿಲ್ಲ. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸದೆ ಅಭಿವೃದ್ಧಿ ಕಾಮಗಾರಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿ ಕೇವಲ ಅಧ್ಯಕ್ಷರ ಪುತ್ರನ ಹಸ್ತಕ್ಷೇಪ ನಡೆಯುತ್ತಿದೆ ಎಂದು ಆರೋಪಿಸಿದರು.
ಫೆ.5 ರಂದು ಸಾಮಾನ್ಯ ಸಭೆ ಕರೆದು ಎಲ್ಲ ಸದಸ್ಯರು ಬಂದಿದ್ದರೂ, ಸಭೆ ಕರೆದ ಪಿಡಿಒ ಇಲ್ಲ ಎಂಬ ನೆಪಕ್ಕೆ ಸಭೆ ರದ್ದು ಮಾಡಿದರು. ಪಿಡಿಒ ಬೇರೆ ಇಲಾಖೆಯ ನೂತನ ಹುದ್ದೆಗೆ ನೇಮಕಗೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ ಎಂದರು.
ಸರ್ವ ಸದಸ್ಯರ ಸಭೆ ಕರೆಯದೆ ಕ್ರೀಯಾ ಯೋಜನೆ ಮಾಡಿದ್ದಾರೆ. ಸದಸ್ಯರನ್ನು ನಿರ್ಲಕ್ಷ್ಯ ಮಾಡಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಂಚಾಯಿತಿ ಅನುದಾನದಲ್ಲಿ ಸಾಮಾಜಿಕ ನ್ಯಾಯ ಕೊಡದೆ ಎಸ್ಸಿ ಎಸ್ಟಿ ಬಡಾವಣೆ ಮತ್ತು ಸಾಮಾನ್ಯ ಬಡಾವಣೆಯಲ್ಲಿ ಅನುದಾನ ಕೊಡದೆ ತಮಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಯಾ ಯೋಜನೆ ಮಾಡಿದ್ದಾರೆ. ಸದಸ್ಯರ ಸಹಿ ಮತ್ತು ಒಪ್ಪಿಗೆ ಪಡೆಯದೇ ಠರಾವು ಪಾಸು ಮಾಡಿದ್ದಾರೆ ಎಂದು ಆಪಾದಿಸಿದರು.
ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ 15 ನೇ ಹಣಕಾಸಿನ ಕ್ರೀಯಾ ಯೋಜನೆ ಮಾಡಿದ್ದಾರೆ. ಅಧಿಕಾರಿಗಳ ಮನೆಗೆ ಹೋಗಿ ಆನುಮೋದನೆ ಪಡೆದಿದ್ದಾರೆ. ಆ ಸಮಯದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರ್ಗಾವಣೆಯಾಗಿದ್ದರೂ ಸಹಿ ಮಾಡಿ ಅನುಮೋದನೆ ಪಡೆದಿದ್ದಾರೆ. ಆ ಅನುಮೋದನೆಗೆ ಯೋಜನಾಧಿಕಾರಿಯ ಸಿಹಿ ಇಲ್ಲ ಪಿಡಿಒ ಅವರನ್ನು ಕೇಳಿದರೆ ನನಗೆ ಅಧ್ಯಕರ ಪುತ್ರನ ಒತ್ತಡವಿತ್ತು ಎಂದು ಹೇಳುತ್ತಾರೆ. ಅದಕ್ಕಾಗಿ ನಾನು ನವಂಬರ್ ತಿಂಗಳಲ್ಲಿ ಒಂದು ವಿಷಯದ ಮೇಲೆ ಠರಾವು ಬರೆದಿದ್ದಾಗಿ ಪಿಡಿಒ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೇ ಮೋಸ ಮಾಡಿ ತಮಗೆ ಬೇಕಾದವರು ಬೇರೆ ಊರುಗಳು ಅಂದರೆ ಬೆಂಗಳೂರು, ಹೈದರಾಬಾದ್ ಕೂಲಿ ಕಾರ್ಮಿಕರ ಹೆಸರಿಗೆ ಎನ್ಎಂಆರ್ ಹಾಕಿ ಬಿಲ್ ಮಾಡಿಕೊಂಡು ಅವರಿಗೆ ಕಮಿಷನ್ ಕೊಟ್ಟು ಅವರಿಂದ ಹಣ ಪಡೆದುಕೊಂಡು ಅವ್ಯವಹಾರ ಮಾಡಿದ್ದಾರೆ. ಸದಸ್ಯರಲ್ಲದವರಿಗೂ ಗೌರವಧನ ನೀಡಲಾಗಿದೆ. ಎಲ್ಲಾ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ತನಿಖಾಧಿಕಾರಿಯನ್ನು ನೇಮಿಸಿದರೂ ಇದುವರೆಗೆ ತನಿಖೆ ಬಗ್ಗೆ ವರದಿ ಬಂದಿಲ್ಲ. ಆದ್ದರಿಂದ ಕೂಡಲೇ ಕೂಲಂಕಷವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ತನಿಖೆಗೆ ವಿಳಂಬವಾದರೆ ಗ್ರಾಮ ಪಂಚಾಯಿತಿ ಎದುರು ಸದಸ್ಯರೆಲ್ಲರೂ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಕಿರಾಣಿಗಿ, ರವೀಂದ್ರರೆಡ್ಡಿ ಅನಪುರ್, ಮುಮ್ತಾಜ್ ಬೇಗಂ ಗಿರಣಿ, ಗುರುಲಿಂಗಮ್ಮ ಮಾಲಿ ಪಾಟೀಲ, ಶಾರದಾ ಹಿರೇಮಠ, ಸಂಗೀತಾ ಸುಬೇದಾರ ಇದ್ದರು.