Oplus_131072

ಶಹಾಬಾದ ನಗರದಲ್ಲಿ ಶ್ರೀರಾಮ ನವಮಿಯ ಶೋಭಾ ಯಾತ್ರೆ, ರಾಮನ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕ: ಮತ್ತಿಮುಡ್

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ವ್ಯಕ್ತಿತ್ವ ಹಾಗೂ ಅವರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಶಾಸಕ ಬಸವರಾಜ ಮತ್ತಿಮುಡ್ ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶ್ರೀರಾಮ ನವಮಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶೋಭಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಮನ ಜೀವನ ಅತ್ಯಂತ ಪವಿತ್ರತೆಯಿಂದ ಕೂಡಿದ್ದು, ರಾಮನ ಮೇಲೆ ಹಿಂದೂಗಳು ಶ್ರದ್ಧೆ, ವಿಶ್ವಾಸ, ನಂಬಿಕೆ ಅಪಾರವಾಗಿದೆ. ಅವರ ಮೇಲೆ ಶ್ರದ್ಧೆ ಇಟ್ಟು ನಡೆದಾಗ ನಮ್ಮೆಲ್ಲರ ಬದುಕು ಪಾವನವಾಗುತ್ತದೆ ಮತ್ತು ಸುಂದರವಾಗುತ್ತದೆ ಎಂದರು.

ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ, ರಾಜು ಭವಾನಿ ಮಾತನಾಡಿದರು. ರಾವೂರಿನ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀರಾಮನ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಶೋಭಾ ಯಾತ್ರೆಯು ಗೌರವಾಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮತ್ತು ಅಧ್ಯಕ್ಷ ರವಿ ರಾಠೋಡ ರವರ ನೇತೃತ್ವದಲ್ಲಿ ಜರುಗಿತು.

ಸತತವಾಗಿ 3 ವರ್ಷದಿಂದ ಇಲ್ಲಿನ ಯುವಕರ ತಂಡವೊಂದು ಶ್ರೀರಾಮನ ಆಳೆತ್ತರ ಮೂರ್ತಿಯ ಭವ್ಯವಾದ ಶೋಭಾ ಯಾತ್ರೆ ಮೆರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು.

ಯುವಕರ ತಂಡ ಹಮ್ಮಿಕೊಂಡಿದ್ದ ಆರಡಿ ಎತ್ತರದ ಶ್ರೀರಾಮ ಮೂರ್ತಿ ಭವ್ಯವಾದ ಶೋಭಾ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದು ಜನಮನ ಸೂರೆಗೊಂಡಿತು. ನಗರದ ಎಲ್ಲೆಡೆ ರಾಮ ನವಮಿಯ ಶೋಭಾ ಯಾತ್ರೆ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಮತ್ತು ವೃತ್ತಗಳಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿದ್ದವು.

ದಾರಿಯುದ್ದಕ್ಕೂ ಜೈ ಶ್ರೀರಾಮ, ಶ್ರೀರಾಮ ಕೀ ಜೈ, ಸೀತಾ ಮಾತಾ ಕಿ ಜೈ, ಜೈ ಹನುಮಾನ ಎಂಬ ಘೋಷಣೆಗಳು ಪ್ರತಿಧ್ವನಿಸಿದವು, ದಾರಿಯುದ್ದಕ್ಕೂ ಡಿಜೆ ವಿಶೇಷ ಹಾಡಿನ ಸಂಗೀತಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು, ಜಯಂತಿ ಪ್ರಯುಕ್ತ ಪ್ರಮುಖ ರಸ್ತೆ ಬದಿಗಳಲ್ಲಿ ಹಾಗೂ ವಿವಿಧ ಬಡಾವಣೆಗಳಲ್ಲಿ ಭಗವಾಧ್ವಜಗಳು ರಾರಾಜಿಸಿದವು.

ಶ್ರೀರಾಮ ನವಮಿ ಶೋಭಾ ಯಾತ್ರೆ ನಿಮಿತ್ತ ಬೀದಿಗಳಲ್ಲಿ ತಂಪು ಪಾನೀಯಗಳ ಜೊತೆ ಕುಡಿಯಲು ನೀರಿನ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮ ನವಮಿಯ ನಿಮಿತ್ತ ಆಯೋಜಿಸಿದ್ದ ಶೋಭಾ ಯಾತ್ರೆಯು ಶರಣಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಭಾರತ ಚೌಕ ಹತ್ತಿರದ ಹನುಮಾನ ದೇವಸ್ಥಾನದ ಹತ್ತಿರ ಸಮಾರೋಪಗೊಂಡಿತು.

ಶೋಭಾ ಯಾತ್ರೆಯಲ್ಲಿ ನಾಗರಾಜ ಮೇಲಗಿರಿ, ವಿಶ್ವರಾಧ್ಯ ಬಿರಾಳ, ಶರಣಬಸಪ್ಪ ಕೋಬಾಳ, ಚಂದ್ರಕಾಂತ ಗೊಬ್ಬೂರ, ಬಸವರಾಜ ಬಿರಾದಾರ, ಸುಭಾಷ ಜಾಪೂರ, ಶಿವಕುಮಾರ ಇಂಗಿನಶೆಟ್ಯಿ, ಅರುಣ ಪಟ್ಟಣಕರ, ಕನಕಪ್ಪ ದಂಡಗುಳಕರ, ರಾಮು ಕುಸಾಳೆ, ದಿನೇಶ ಗೌಳಿ, ಭಾನದಾಸ ತುರೆ, ಬಸವರಾಜ ಸಾತ್ಯಾಳ, ಗೋವಿಂದ ಕುಸಾಳೆ, ಶಿವಕುಮಾರ ತಳವಾರ, ಸುಬೇದಾರ, ಬಸವರಾಜ ಮದ್ರಕಿ, ಮೋಹನ ಹಳ್ಳಿ, ನವೀನ ಸಿಪ್ಪಿ, ಲೋಹಿತ ಮಳಖೇಡ, ಶ್ರೀನಿವಾಸ ದೇವಕರ, ಶ್ರೀನಿವಾಸ ನೇದಲಗಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಯುವಕರು ಹಾಗೂ ರಾಮ ಭಕ್ತರು ಉಪಸ್ಥಿತರಿದ್ದರು.

ನಗರದಲ್ಲಿ ಶ್ರೀರಾಮ ನವಮಿಯ ಶೋಭಾ ಯಾತ್ರೆಗೆ ನಗರ ಪೋಲಿಸ್ ಠಾಣೆಯ ಪಿಐ ನಟರಾಜ ಲಾಡೆ ಯವರ ನೇತೃತ್ವದಲ್ಲಿ ಪಿಎಸ್ಐ ಚಂದ್ರಕಾಂತ ಮಕಾಲೆ, ನಾಗೇಂದ್ರ ತಳವಾರ, ದೊಡ್ಡಪ್ಪ ಪೂಜಾರಿ, ಸಂತೋಷ ದೊಡ್ಡಮನಿ, ಹುಸೇನ ಪಟೇಲ ಸೇರಿ ಅಹಿತಕರ ಘಟನೆ ಸಂಭವಿಸಿದಂತೆ ಬೀಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Spread the love

Leave a Reply

Your email address will not be published. Required fields are marked *

You missed

error: Content is protected !!