ಶರಣಬಸವೇಶ್ವರ ದೇಗುಲ ಜೀರ್ಣೋದ್ದಾರಕ್ಕೆ ಒಂದು ತಿಂಗಳ ಪಿಂಚಣಿ ಹಣ ದೇಣಿಗೆ ನೀಡಿ ಮಾದರಿಯಾದ ಮಲ್ಲಣ್ಣ ಮಾಸ್ಟರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನನಗೆ ಸಮಾಜ ಏನು ಮಾಡಿದೆ ಅನ್ನುವ ವಿಚಾರ ಬಿಟ್ಟು ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ಆತ್ಮಸಾಕ್ಷಿ ಉತ್ತರ ನೀಡುವುದು ಎಂದು ವೀರಶೈವ ಸಮಾಜದ ಹಿರಿಯ ಮುಖಂಡ ನಿವೃತ್ತ ಶಿಕ್ಷಕ ಮಲ್ಲಣ್ಣ ಮಾಸ್ಟರ್ ಮುಡಬೂಳ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶರಣಬಸವೇಶ್ವರ ದೇಗುಲ ಜೀರ್ಣೋದ್ದಾರಕ್ಕೆ ತಮ್ಮ ಒಂದು ತಿಂಗಳ ಪಿಂಚಣಿ ಹಣವನ್ನು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಅವರಿಗೆ ಚೆಕ್ ಮುಖಾಂತರ ದೇಣಿಗೆ ನೀಡಿ ಮಾತನಾಡಿ, ಕೇವಲ ಹೆಸರಿಗಾಗಿ, ವೈಯುಕ್ತಿಕ ಪ್ರಚಾರಕ್ಕಾಗಿ ಬದುಕದೆ ಸಮಾಜದ ನಿರ್ಗತಿಕರ, ಅಭಯಹಸ್ತ ಬಯಸುವ ಜೀವಿಗಳ ಪರ ಮನ ಮಿಡಿಯುವ ಹೃದಯ ಹೊಂದಿರಬೇಕು ಎಂದರು.
ವೀರಶೈವ ಸಮಾಜದ ಅಧ್ಯಕ್ಷ ನಾಗರಾಜ ಭಂಕಲಗಿ ಚೆಕ್ ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಪಾವನವಾದದ್ದು, ತಮ್ಮ ಪಾಠದಿಂದ ಮತ್ತು ಇನ್ನಿತರ ಚಟುವಟಿಕೆಯಿಂದ ಹೆಸರುವಾಸಿಯಾದ ಚಿತ್ತಾಪುರ ಪಟ್ಟಣದ ನಿವೃತ್ತ ಶಿಕ್ಷಕ ಮಲ್ಲಣ್ಣ ಮಾಸ್ಟರ್ ಮುಡಬೂಳ ಅವರ ವೃತ್ತಿ ಬದ್ಧತೆ, ಸಮಾಜಸೇವೆ ಬಹು ಆಳವಾದದ್ದು ಶಬ್ದಗಳಿಗೆ ನಿಲುಕದು. ಮಿತ ಭಾಷಿ ಸದ್ದಿಲ್ಲದೇ ಚಿತ್ತಾಪುರ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅವರ ಸಮಾಜಸೇವೆ, ನಿಶ್ಕಲ್ಮಶ ವ್ಯಕ್ತಿತ್ಪಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
87 ರ ಇಳಿ ವಯಸ್ಸಿನಲ್ಲಿಯೂ ಅವರ ಉತ್ಸಾಹಿ ಜೀವನಶೈಲಿ ಯುವಕರಲ್ಲಿ ಉತ್ಸಾಹ ಪುಟ್ಟಿದೆಳಿಸುವಂತಿದೆ, ವೀರಶೈವ ಸಮಾಜ, ಶಿಕ್ಷಕರ ಸಂಘ, ಪತಂಜಲಿ ಯೋಗ ಸಮಿತಿ ಗ್ರಂಥಾಲಯದ ಹಿರಿಯ ಸದಸ್ಯರು, ಸಮಾಜದ ಬಹುತೇಕ ರಂಗದಲ್ಲಿ ತಮ್ಮ ಸೇವೆಯ ಮುಖಾಂತರ ಮನೆ ಮಾತಾಗಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಶ್ರೀನಿವಾಸ ರೆಡ್ಡಿ ಪಾಲಪ್, ಮುಖಂಡರಾದ ಚಂದ್ರಶೇಖರ ಉಟಗೂರ್, ಆನಂದ ಪಾಟೀಲ ನರಿಬೋಳ, ಅಂಬರೀಶ ಸುಲೇಗಾಂವ್, ಚಂದ್ರಶೇಖರ ಬಳ್ಳಾ , ಅನಿಲ್ ವಡ್ಡಡಗಿ, ಕೋಟೇಶ್ವರ ರೇಶ್ಮಿ, ಶಾಂತಕುಮಾರ ಹತ್ತಿ, ಮಹಾದೇವ ಅಂಗಡಿ ಸೇರಿದಂತೆ ಇತರರು ಇದ್ದರು.