ಶಿಕ್ಷಕರಾಗಿ ಪಾಠ ಮಾಡಿದ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಣ್ಣ ಬಣ್ಣದ ಸೀರೇಯುಟ್ಟ ವಿದ್ಯಾರ್ಥಿನಿಯರು, ಹೊಸ ಬಟ್ಟೆ ಧರಿಸಿದ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ತಾವು ಇವತ್ತು ಯಾವ ಪಾಠ ಮಾಡಬೇಕು, ಅದಕ್ಕೆ ಯಾವ ಪಾಠೋಪಕರಣ ಬಳಸಬೇಕು ಎಂಬ ವಿಷಯದ ತಯಾರಿ ಮಾಡಿಕೊಂಡು ತಮ್ಮ ತರಗತಿಯ ವಿಷಯ ಶಿಕ್ಷಕರು ನೀಡಿದ ತರಬೇತಿಯಂತೆ ತುಂಬಾ ಅಚ್ಚುಕಟ್ಟಾಗಿ ಮಕ್ಕಳು ಶಿಕ್ಷಕರಾಗಿ ಪಾಠ ಬೋಧನೆ ಮಾಡಿ ಸೈ ಎನಿಸಿಕೊಂಡರು. ಇಂತಹ ಪ್ರಯೋಗ ನಡೆದಿದ್ದು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ.
ಮಕ್ಕಳಲ್ಲಿ ಬೋಧನಾ ಸಾಮರ್ಥ್ಯ ಬೆಳೆಸಲು ಅಂತಾರಾಷ್ಟ್ರೀಯ ಮಕ್ಕಳ ದಿನದ ಅಂಗವಾಗಿ ಮಕ್ಕಳ ಒಂದು ದಿನದ ಆಡಳಿತ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರು, ಶಿಕ್ಷಕರೇ ಮಕ್ಕಳಾಗಿ ತಮ್ಮ ಪಾತ್ರಗಳನ್ನು ಬದಲಾಯಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಕ ತಾನು ಆಯ್ಕೆ ಮಾಡಿಕೊಂಡ ಬೋಧನಾ ಅಂಶಗಳನ್ನು ಕರಗತ ಮಾಡಿಕೊಂಡು ಅದಕ್ಕೆ ಬೇಕಾದ ಮಾಡೆಲ್ ಮಾತ್ತು ಚಾರ್ಟ್ ಗಳನ್ನು ತಂದು ಮಕ್ಕಳಾಗಿ ಕ್ರಿಯಾಶೀಲವಾಗಿ ಪಾಠಗಳನ್ನು ಮಾಡಿ ಸೈ ಎನಿಸಿಕೊಂಡರು.
ಅಕ್ಷತಾ, ಭೂಮಿಕಾ, ಶಿವಲಿಂಗ, ಸುನೀಲ್, ಶ್ರೀನಾಥ, ಮಹೇಶ, ಕಾವ್ಯ, ಹರ್ಷಿತ್ ಸೇರಿದಂತೆ ಹಲವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಮುಖ್ಯಗುರುಗಳು, ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರು.
“ಮಕ್ಕಳಲ್ಲಿ ಹುದುಗಿರುವ ಬೋಧನಾ ಸಾಮರ್ಥ್ಯ ಗುರುತಿಸಲು, ತರಗತಿ ನಿರ್ವಹಣೆ, ಧೈರ್ಯ ಮುಂತಾದ ಗುಣಗಳನ್ನು ಬೆಳೆಸಲು ಹಮ್ಮಿಕೊಂಡಿದ್ದ ಈ ಪ್ರಯತ್ನ ಅತ್ಯಂತ ಯಶಸ್ವಿಯಾಯಿತು”.- ಸಿದ್ದಲಿಂಗ ಬಾಳಿ ಶಿಕ್ಷಕ.
“ನಾವು ಶಿಕ್ಷಕರಾಗಿ ಪಾಠ ಮಾಡಿದ್ದು ನಮಗೆ ಖುಷಿಯಾಗಿದೆ. ವಾರಗಳ ಮುಂಚೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ. ಧೈರ್ಯ ತುಂಬಿದರು ಹಾಗಾಗಿ ನಾವು ಪ್ರಯೋಗಗಳ ಮೂಲಕ ಪಾಠ ಮಾಡಲು ಸಾಧ್ಯವಾಯಿತು”.-ಶಿವಲಿಂಗ ವಿದ್ಯಾರ್ಥಿ