ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ, ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯ: ಬಸವರಾಜ ಬೆಂಡೆಬೆಂಬಳಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದ್ದು, ವಚನಗಳು ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಹಿರಿಯ ಕವಿ, ನಿವೃತ್ತ ಶಿಕ್ಷಕ ಬಸವರಾಜ ಬೆಂಡೆಬೆಂಬಳಿ ತಿಳಿಸಿದರು.
ಇಲ್ಲಿನ ಮಹಾತ್ಮ ಬಸವೇಶ್ವರ ನಗರದಲ್ಲಿ ವಚನೋತ್ಸವ ಸಮಿತಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಚಿತ್ರಶೇಖರ ಶೀಲವಂತ ಅವರ ಮನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಸಮಾಜದಲ್ಲಿ ಧನ ಮದ, ವಿದ್ಯೆಯ ಮದ, ಅಧಿಕಾರ ಮದ, ಯೌವನದ ಮದ ತುಂಬಿಕೊಂಡಿದ್ದು, ಇದಕ್ಕೆ ವಚನಗಳೇ ದಿವ್ಯ ಔಷಧಿಗಳಾಗಿವೆ. ವಚನಗಳನ್ನು ಪಠಿಸದೆ ವಚನಗಳನ್ನು ಪಚನ ಮಾಡಿಕೊಂಡು ಬದುಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ, ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಸಿದ್ಧರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿ, ಅರಿವು, ಆಚಾರ, ಅನುಭಾವ ಮುಂತಾದ ನೈತಿಕ ಮೌಲ್ಯಗಳನ್ನು ಒಳಗೊಂಡ ಸಿದ್ಧರಾಮರ ವಚನಗಳು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.
ಜನಹಿತಕ್ಕಾಗಿ ಲಕ್ಷದ ಮೇಲೆ 96 ಸಾವಿರ ಗುಡಿ, ಕೆರೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸಿದ್ಧರಾಮರು, ಅಲ್ಲಮಪ್ರಭುಗಳ ಸಂಪರ್ಕದಿಂದ ಶರಣ ಮಾರ್ಗಕ್ಕೆ ಬಂದು ಶಿವಯೋಗಿ ಎನಿಸಿಕೊಂಡರು ಎಂದು ಅಭಿಪ್ರಾಯಪಟ್ಟರು.
ರುದ್ರಪ್ಪ ಪಾಟೀಲ, ಮಲ್ಲಣ್ಣ ಕೊಟ್ರಶೆಟ್ಟಿ, ನಾಗೇಂದ್ರಪ್ಪ ಬಿರಾದಾರ, ಗಿರಿಜಾ ಶೀಲವಂತ, ಗಿರಿಜಾ ಶೀಲವಂತ, ವಿಜಯಲಕ್ಷ್ಮೀ ಮೂಲಗೆ, ಬಸವರಾಜ ದೂಳಾಗುಂಡಿ, ಡಾ. ಸಂಗಮೇಶ ಹಿರೇಮಠ ಇತರರಿದ್ದರು. ಮಾನಸಾ ಹಿರೇಮಠ, ವಿಜಯಲಕ್ಷ್ಮೀ ವಚನಗಳನ್ನು ಹಾಡಿದರು.
ಸೋಮಶೇಖರ ಕುಂಬಾರ ನಿರೂಪಿಸಿದರು. ಚಿತ್ರಶೇಖರ ಶೀಲವಂತ ಸ್ವಾಗತಿಸಿದರು. ಕಲ್ಯಾಣಪ್ಪ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು. ವೀರಣ್ಣ ತೊರವಿ ವಂದಿಸಿದರು.